ಗಾಂಧಿಬಜಾರ್.
ನಾಲ್ಕು ದಶಕಗಳ ದಿನನಿತ್ಯ ಆತ್ಮೀಯ ಒಡನಾಟ
ಕದಲಿಲ್ಲ ಇಲ್ಲಿಂದ ವಲಸೆ ಬಂದ ದಿನದಿಂದ,
ಆವಾಸ ದಾನಕ್ಕೆ ತೀರಿಸಲಾಗದ ಋಣದಹೊರೆ ಹೊತ್ತು
ಮುಲಾಜಿಗೆ ಇರಬೇಕು, ಬಿಡಲಾರದ ಈ ಅಪರೂಪದ ಸಂಭಂದ
ಈ ಗಾಂಧಿಬಜಾರ್ ರಸ್ತೆಯ ಜೊತೆಯ ಅನುಭಂದ,
ಗಾಂಭೀರ್ಯದ ಈದಾರಿ ಕಾಯ್ಕುಕೊಂಡಿದೆ ವ್ಯವಹಾರಿಕ ದೂರ
ತನ್ನವನಾಗಿ ಮಾಡಿಕೊಳ್ಳದೆ ಇಂದಿಗೂ,
ಭೂರಿ ಬೋಜನ ಬಡಿಸದಿದ್ದರೂ
ಖಾಲಿಹೊಟ್ಟೆಗೆ ಎಂದೂ ಹಾಡಿಲ್ಲ ಒಂದು ಲಾಲಿ
ತನ್ನರಸ್ತೆಯ ಸಾಮಾನ್ಯ ಪಂಕ್ತಿಯಲ್ಲೇ ಇಡ್ಲಿಕೊಟ್ಟು
ತಲೆ ತಟ್ಟಿ ಜೋಗುಳದಲ್ಲಿ, ಬಸವನಗುಡಿ ಬಂಡೆಗಳ ಮೇಲೆ ಕನಸು ಕೆತ್ತಿಸಿದೆ.
ಅನ್ನವೇ ಕನಸಾದ ಕಾಲ, ಚಿತ್ರಾನ್ನದಲೇ ತಣ್ಣಗಾಗುತ್ತಿದ್ದ ಹಸಿವು
ಕೃತಜ್ಞನಾಗಿರಬೇಕೇ ಹೊರತು, ಸಮಾನರಾಗುವುದಿಲ್ಲ
ಧೀರ್ಘ ಸ್ನೇಹದ ಸಲಿಗೆಗೆ ಅವಕಾಶವಿಲ್ಲ.
ಯಾರಿಗೂ, ಎಂದೂ, ತನ್ನ ಪರಕೀಯತೆ ಬಿಟ್ಟುಕೊಟ್ಟಿಲ್ಲ.
ದೂರ ತಳ್ಳುವುದಿಲ್ಲ, ಹತ್ತಿರ ಸೇರಿಸುವುದಿಲ್ಲ
ಯಾರನ್ನೂ ಸಹಾ, ಆಗರ್ಭ ಶ್ರೀಮಂತರಹಾಗೆ,
ಗೌರವಾನ್ವಿತ ಗಾಂಭೀರ್ಯದ ಅಂತರ ಅನಿವಾರ್ಯ.
ಇರಬಹುದು ಇದರ ಘನತೆ ಅನ್ಯತೆಯ ಧನ್ಯತೆಯಲ್ಲಿ
ಬರುವವರೆಲ್ಲಾ ಇಲ್ಲೇ ನಿಲ್ಲುವರಲ್ಲ ಎಂಬ ಕಟುಸತ್ಯ
ಅರಿವಾಗಿ ಇಳಿದಿದೆ ಆಳದಲಿ ಅನುಭವದ ಪಾಠ,
ತನ್ನಿರುವಿನಿಂದಲೇ ಹರಸಿ, ಆಶೀರ್ವದಿಸುವ ಸಂತ, ಮಠಾದೀಶ
ಸಾಮಾನ್ಯ ಯಾತ್ರಿಗೆ ತೀರದ ವ್ಯಾಮೋಹ.
ಏನನ್ನೂ, ಯಾರಿಂದಲೂ ಪಡೆಯದ ಈ ಪರದೇಸಿ
ಯೋಗ್ಯರಿಗೆ ತಕ್ಕಂತೆ ದೊರೆತಿದೆ ಅವರವರ ಪಾಲು
ಎಲ್ಲರ ಅನಿವಾರ್ಯ ಪೂರೈಸಿದೆ ಬೇಕುಗಳ, ಯೋಗ್ಯರಿಗೆ
ಮುಲಾಜಿಲ್ಲದ ನಿರ್ದಾಕ್ಷಿಣ್ಯ ಸಂಭಂದ ಲಕ್ಷಣ.
ತಿಳಿದಿದೆ, ತಾನೊಂದು ರಸ್ತೆಮಾತ್ರ ಹಾದಿಹೋಕರಿಗೆ
ನಾಮಧೇಯರ ನಡಿಗೆಯಲಿ ನುಣುಪಾಗಿರುವ ರಸ್ತೆಗಳು
ಬಿ.ಎಂ.ಶ್ರೀ,ಡಿ.ವಿ.ಜಿ, ಎಚ್.ಎನ್, ಮಾಸ್ತಿ, ಆನಕೃ,ಆಣ್ಣಯ್ಯ,
ಅಳೆದಿದ್ದ, ನಡೆದಿದ್ದ ಇಂಚಿಂಚು ಬಜಾರಿನ ಒಡನಾಟ
ಅಲ್ಲೇ ಟ್ಯಾಗೂರ್ ವೃತ್ತದಲಿ ಯುವಕ ಕೇಂದ್ರ
ಪಕ್ಕದಲೇ ವಿಶ್ವ ಸಾಂಸ್ಕೃತಿಕ ಸ್ಥಾನ, ಬದಿಗೆ ರಾಮಕೃಷ್ಣರ ಆಶ್ರಮ,
ಹಚ್ಚಿದ್ದರು ಯುವಕರು ಸ್ವಾತಂತ್ರದ ಕಿಚ್ಚು ಹಿಂದೊಮ್ಮೆ
ಲಂಕೇಶರ ಬೆಳಗು, ಆಡಿಗರ ಸಂಜೆ, ಕಿ.ರಂ ರ ರಮ್ ರಾತ್ರಿ
ಮಿಂಚುತ್ತಿದ್ದ ಸಾಹಿತ್ಯ ಸಂಚು, ನಿಸಾರರ ವಾಯು ವಿಹಾರ
ವೈಎನ್ಕೆ ಹಾಸ್ಯದ ಮಿಂಚು, ಕಾರಂತರ ಕಂಠ ಕಂಚು,
ಲಿಪಿಯಲ್ಲೇ ಬಾಕಿಯಾಗಿದ್ದ ಬಾ.ಕಿ.ನ,
ವಲಸಿಗ ಪ್ರತಿಭಾನ್ವಿತ ಯುವ ದಂಡು ಹಾಕುತ್ತಿತ್ತು ಗುಂಡು
ಬೆಳೆದು ಆಕ್ರಮಿಸಲಿಲ್ಲ ವಿದ್ಯಾರ್ಥಿಭವನ ಭವ್ಯವಾಗಿ
ಉಳಿಸಿಕೊಂಡಿದೆ ಭವ್ಯತೆಯನು ಮಾತ್ರ ಸ್ಮಾರಕದಂತೆ
ದ್ವಾರಕ ಭವನ, ಅವಸಾನ ಕಂಡಿದೆ ಚಟ್ನಿಯಲ್ಲಿ
ಗೀತಾರೆಸ್ಟೋರೆಂಟನ ಸಾಂಬಾರು ಸೋತಿತು ಎಲ್ಲರನು ಬೆಳಸಿ
ಡಬಲ್ ಡೆಕ್ಕರ್, ಟೇಲರ್ ಬಸ್ ಗಳ ನಿಲ್ದಾಣ, ಗತ ಇತಿಹಾಸ
ರಸ್ತೆ ಹನ್ನೊಂದರ ಕೊನೆಯ ನಿಲುಗಡೆ ಮೇಕ್ರಿವೃತ್ತ ಇಂದು ಶೂನ್ಯ
ಹಿಡಿತಕ್ಕೆ ಸಿಕ್ಕದ ಈ ಗೂಳಿ, ಬೀದಿಬಸವ ! ಗುಡಿಯಲ್ಲಿದ್ದರೂ
ಜಾರುತ್ತದೆ ಆಕ್ಟೋಪಸ್ ನಂತೆ ಎಲ್ಲರಿಗೂ ಭ್ರಮೆಯಾಗಿ
ಕ್ಷಣ, ಕ್ಷಣಕೂ ಬಣ್ಣಕಳಚುವ ಓತಿಕ್ಯಾತ, ಈ ಮಾಯಾಬಜಾರ್
ಹೆಸರು ಮಾತ್ರ ಗಾಂಧಿಬಜಾರ್....
Comments