ಕೈ ಮುಗಿದು ಒಳಗೆ ಬಾ ಇದು ಸಸ್ಯಕಾಶಿ.......


ಚುಮು,ಚಿಮು ಬೆಳಕು ಚಿಗುರುವ ಮುನ್ನ,
ಚಿಲಿಪಿಲಿ ಹಕ್ಕಿಗಳು ಗೂಡುಬಿಡುವ ಮುನ್ನ
ನಡೆಯುತ್ತಾರೆ, ನಡಿಗೆಪ್ರಿಯ ನಾಗರೀಕರು 
ತಮ್ಮ ನಗರದ ಶ್ವಾಸಕೇಂದ್ರಗಳಲ್ಲಿ
ಕತ್ತಲ, ಸದ್ದಡಗಿದ ಮುಸುಕಿನ ಮಂಪರ ಮುಂಜಾವಿನಲ್ಲಿ
ಬಡಾವಣೆಯ ನಡು ಮಧ್ಯದ ಹೆಮ್ಮೆಯ ತಮ್ಮ ಕಾಡಲ್ಲಿ
ವಾಯುವಿಹಾರ, ಚಲನಾಸಕ್ತರು ಕಾವಲುಗೋಪುರದ ಸುತ್ತುತ್ತಾ 
ಮೂರು ಪ್ರದಕ್ಷಣೆ ಮುಗಿಸಿ,ತೀರ ಸುಸ್ತು
ಆರಾಮದಾಯಕ ಆಯಾಸದಲ್ಲಿ ಅಸೀನರು

ನಡಿಗೆಗೆಂದೇ ಸಮವಸ್ತ್ರ, ಕಿವಿಗೆ ಅಂಟಿದ ಗಾಯನ
ನಿಶ್ಯಭ್ದ ಗಾನಾಲಾಪ ಕಿವುಡರ ಸಾದನ 
ಹಿಡಿತಕ್ಕೆ ತಕ್ಕ ಪಾದರಕ್ಷೆಗಳು, ತೋರಿಕೆಗೆ ಬೂಟು 
ಅತ್ಯಾಕರ್ಷಕ ನವೀನ ಟ್ರ್ಯಾಕ್ ಸೂಟು
ನಿಂತಲ್ಲೇ ನಡೆಯುವ, ಓಡುತ್ತ ನಡೆಯುವ, 
ನಡೆಯುತ್ತ ಓಡುವ, ಗತಿಯಲ್ಲೇ ಪಡೆವ ಕರ್ಣಾನಂದ
ಗುಂಪಲ್ಲಿ ಗದ್ದಲವೆಬ್ಬಿಸುವ ಉತ್ಸಾಹಿ   ಹವ್ಯಾಸಿಗಳು
ವಿಶ್ವ ವರ್ತಮಾನ, ಗಹನ ಚರ್ಚಾ ವ್ಯಸನಿಗಳು

ಉದ್ಯಾನ ತಜ್ಞನ ಅಭಿರುಚಿಯ ಅಭಿವ್ಯಕ್ತಿ 
ಗಿಡ ಮರಗಳ ಇರುವಿನ ಆಯ್ಕೆ
ತನ್ನಿಚ್ಛೆಗನುಸಾರ ಪುಷ್ಪ ಸಿಂಗಾರ 
ಕಂಡ ಕಂಡಲ್ಲಿ ಕತ್ತರಿಸಿ ಕಾಂಡ, ಮುಂಡಾಯಿಸಿ ರುಂಡ 
ಕುಂಡದಲಿ ನೀರುಣಿಸಿ, ಗುಲಾಮಗಿರಿ ಗಿಡ ಕೃಷಿ
ಸಿಕ್ಕು, ಸಿಕ್ಕಾದ ತಂತಿಗಳ ಬಲೆಯಲ್ಲಿ ಬಿಗಿದ ನೇಣುಗಳಲ್ಲಿ 
ಎಲೆಗಳ ಚೀತ್ಕಾರ ನರಳುವ ಕಾಂಡ ಕಂಬಗಳಮೇಲೆ
ಅಸಹಾಯಕ ಟೊಂಗೆಗಳು, ಅತೃಪ್ತ ರೆಂಬೆಗಳು, 
ಕವಲಗಾದ ಕಳವಳ, ವಿಧಿಯಿಲ್ಲ ಬೆಳೆಯಬೇಕು ತುಂಡರಿಸಿದಂತೆ
ಜೀತದಾಳುಗಳ ಈ ಜೀವಸಂತೆಯಲಿ, ಜಾಡಮಾಲಿಯ ದರ್ಬಾರು
ಜಾಮಿತಿಯ ರೂಪ ಪಡೆದು ಕಳದೇ ಹೋಗಿವೆ ಇಲ್ಲಿ
ಅಳೆದು, ಹೊದಿಸಿದ ಸಂಚಲನ ಪಥ ಕಲ್ಲುಹಾಸು
ಅಂಕು, ಡೊಂಕಾದರೂ ಮೃದು ಗಾರೆ ದಾರಿ.

ವೃತ್ತ, ಚೌಕಗಳ ನಿಖರ ಅಳತೆಯಲ್ಲೇ ಹಿಗ್ಗುವ ವಿನಯವಂತ 
ಹಸಿರುಹಾಸು, ಮನಬಂದಂತೆ ಬೆಳೆಯುವಂತಿಲ್ಲ,
ಮೀರಿದರೆ ಮಿತಿ, ಆಗಲೇ ಬೇಕು ವನಮಾಲಿಯ 
ಕತ್ತರಿ, ಕುಡುಗೋಲು, ಕೊಡಲಿಗಳಿಗಾಹುತಿ  
ವಿರೂಪ ಬಳ್ಳಿ ಗಿಡಗಳ ಅರಣ್ಯರೋಧನ  
ಹೇರಲ್ಪಟ್ಟ ಹೊಸರೂಪದ ಅವಮಾನದಲ್ಲಿ,  
ಕಸಿಯಾದ ಹೂಗಳು, ಹುಸಿಯಾದ ನಿರ್ವರ್ಣದಲಿ 
ಪಡೆದಾಗಿದೆ ನಿರ್ವಾಣ ಬುದ್ಧನಂತೆ,   
ಶಾಂತ ಮಂದಹಾಸ ಮಂಕಾಗಿದೆ ಮಾತ್ರ
ಆದರೂ...ನನ್ನ ವಿನಂತಿ
'ಕೈ ಮುಗಿದು ಒಳಗೆ ಬಾ ಇದು ಸಸ್ಯಕಾಶಿ..'


Comments

Popular posts from this blog

Reunited...at last..

ಕಾಗೆ....

The Crow.