11-07-2018.

ಶಾಪ.
ಸ್ವಚ್ಛ ಗೊಳಿಸುವ ಹಳ್ಳಿಯ ಗುತ್ತಿಗೆದಾರ
ಮಳೆರಾಯ, ಹೆಚ್ಚು ಕಡಿಮೆ, ಕಾಲಪ್ರಜ್ಞ
ಸಮಯಪಾಲಕ,
ಬಂದೇ ಬರುತ್ತಾನೆ ವರುಷದಲ್ಲಿ ಒಮ್ಮೆ
ಸಮಯ ಸ್ವಲ್ಪ ಹಿಂಚು, ಮುಂಚು,
ಸಿಂಪಡಿಸಿ ಮಳೆನೀರ, ಸೂಕ್ತ ಮಿಶ್ರಣದಲ್ಲಿ
ತೊಳೆದು, ಬಳೆದು, ಶುಚಿಗೊಳಿಸುತ್ತಾನೆ
ಸಾರಿಸಿ, ಗುಡಿಸಿ, ಮನೆ, ಕೇರಿ, ಹಾದಿ, ಬೀದಿ,
ಧೂಳು ಝಾಡಿಸಿ, ರಬಸದಲಿ ತಿಕ್ಕಿ
ಆರಲು ಬಿಟ್ಟಾಗ, ಹಳ್ಳಿ
ಚಿತ್ರಕಾರನ ಕ್ಯಾನ್ವಾಸ್ ಮೇಲೆ, ಹೊಚ್ಚಹೊಸ
ಹೊಳೆಯುವ ಸುಂದರ ಭೂವಿನ್ಯಾಸ ಚಿತ್ರ
ಹುಳ, ಕೀಟ, ಹುಪ್ಪಡಿ, ಗಿಡ, ಮರ, ಮೂಲಿಕೆ
ಹೂ, ಎಲೆಗಳು ರೂಪಪಡೆಯುತ್ತವೆ ,ಸ್ಪಷ್ಟವಾಗಿ
ಮತ್ತೊಮ್ಮೆ, ತಮ್ಮ ರೆಂಬೆ, ಟೊಂಗೆಗಳ ಮೇಲೆ
ಮನಮುಟ್ಟುವ ಪ್ರಕೃತಿಯ ಬಣ್ಣ
ಹೊಳೆಯುವ ಎಲೆ, ಚಿಗುರು, ಮೊಗ್ಗು, ಹೂ
ಮರುಜೀವ ಗಳಿಸಿ, ಗಾಳಿಯಲಿ ತೂಗಿ
ಅಭಾರಿಯಾಗಿ ನಲಿದು ತೂಗುವಾಗ,
ಉಲಿಯುತ್ತವೆ ಕೋಗಿಲೆ, ಕಪ್ಪೆಗಳ ವೃಂದಗಾನ,
ಗವಾಕ್ಷಿಯಲಿ ಹೊಗೆ ಏರುತ್ತದೆ ಮೇಲೆ,
ತೊಳೆದ ರಾಡಿನೀರು ಧೂಳಿನ ಡಿಕಾಕ್ಷನ್
ಹರಿಯುತ್ತದೆ, ಈಗತಾನೆ ತೊಳೆದ, ಎಲ್ಲರ ಮನೆಮುಂದೆ
ಮಕ್ಕಳ ಕಾಗದದ ದೋಣಿಗಳ ಹೊತ್ತು
ಕಸ, ಕಡ್ಡಿ, ಒಣ ಸಗಣಿ ತೇಲಿ,ನೊರೆಯಾಗಿ
ತೊರೆಯಾಗಿ, ದಾಟಿ ಹಳ್ಳ,
ಕೆರೆ ಮುಟ್ಟಿಸಿ ತಳ ತಲುಪಿ ಹೂಳುಗೊಬ್ಬರ,
ನೇಗಿಲ ಯೋಗಿ, ವರ್ಷಪೂರ್ತಿ ಹರ್ಷ
ಹುಟ್ಟಿದ ಮರಿ,
ಮಳೆಯಲಿ ತೋಯ್ದ ಹಳ್ಳಿಯ ಹಸಿರು
ಸದಾ ಖುಷಿಕೊಡುವ ನೋಟ ನೆನಪೀಗ ಮಾತ್ರ
ಬದಲಾಗಿದೆ ಕಾಲ
ಆದರೂ, ಅದೇ ಗುತ್ತಿಗೆದಾರ,
ಪ್ರಾಯದ, ಮುಂಗೋಪ
ಬದಲಾಗಿದ್ದಾನೆ, ಯವುದೋ ಪ್ರಲೋಭದಲಿ ಭ್ರಷ್ಟ,
ಅದೇ ನೀರಂತೂ ಅಲ್ಲ, ಆದರೂ
ಬದಲಾಗದ ಶುಭ್ರಗೊಳಿಸುವಿಕೆ ವಿಧಾನ
ನಿಯತ್ತಿನಲಿ, ತೊಳೆಯುತ್ತಾನೆ,
ಸಂಧಿ,ಗೊಂದಿ ಬಿಡದೆ ತೀಡಿ ತಿಕ್ಕಿ ಜೆಟ್ ಜಳಕಕ್ಕೆ ತಳ್ಳಿ
ಆವಾಸ ಬೀಳಿಸಿ, ಗಾಡಿಗಳ ಉರುಳಿಸಿ, ರಾದ್ದಾಂತ ಮಾಡಿ
ಕೊಳೆ ತೆಗೆದರೂ ಮಾಸದ ಕಲೆ
ಸುಂದರ ಕ್ಯಾನ್ವಾಸ್ ಆಗಬಲ್ಲದೆ
ಬದಲಾದ, ಅಸ್ವಾಭಾವಿಕ ಬಣ್ಣಗಳು ,
ಒಪ್ಪದ ನಮ್ಮ ಕಣ್ಣುಗಳು
ತೊಳೆದರೂ ಹೊಲಸು, ಸೇರುವುದಿಲ್ಲ ಹಳ್ಳಿಯ ಹಳ್ಳ
ತೊರೆ ಹರಿಯುತ್ತಿಲ್ಲ, ಕೆರೆಯತಳ ಸೇರುತ್ತಿಲ್ಲ
ಅಲ್ಲಲ್ಲೇ ಟಿಕಾಣೆ, ನೊರೆಬಣ್ಣದ ಆಟದಲಿ ತ್ಯಾಜ್ಯ
ಕಸವೇಕೊ ಮುಳುಗುತ್ತಿಲ್ಲ, ಕರಗುತ್ತಲೂ ಇಲ್ಲ
ಯಾಕೋ ತಳದ ಕಸ ಕೊಳೆಯುತ್ತಲೂ ಇಲ್ಲ
ಅಸ್ತಿಪಂಜರ
ತೇಲುವ, ನಿರ್ಜೀವ ದೇಹಗಳು
ಮಾರ್ಜಕ, ವಿಸರ್ಜಕಗಳು,
ಪ್ಲಾಸ್ಟಿಕ್ ಶೇಷ, ಶೀಶೆ, ತೆಳುತಗಡಿನ ಖಾಲಿ ಡಬ್ಬಿ,
ಪೊದೆಗಳ ಬುಡದಲ್ಲೇ ಗಂಟಾಗಿ ಸಿಕ್ಕು,
ಕಂಡರಿಯದ ವಿದ,ವಿದದ ಅಸಹಜ ಬಣ್ಣ,
ದಿಕ್ಸೂಚಕ ಗಾಳಿ ಪಟಗಳು ನೇತುಬಿದ್ದಿವೆ
ಎಲೆಯ ವರ್ಣಕದಲ್ಲಿ
ಮೊಗ್ಗು, ಹೂವಿನ ಮಗ್ಗುಲಿನಲ್ಲಿ
ಯಾವುದೋ ಹೊಸ ಸಂಕರ ತಳಿ
ಹರಡಿಕೊಂಡಿವೆ ಎಲ್ಲೆಲ್ಲೂ
ಮಳೆ ಬರುತ್ತಿದೆ, ಹಳ್ಳ ಹರಿಯುತಿದೆ
ಕೋಡಿ ಒಡೆದರೂ, ಕೊಚ್ಚಿಹೋಗದ
ಅಸಹ್ಯ........
ಕರಗದು, ಮುಳುಗದು, ಕೊಳೆಯದು
ತೇಲುವ ಪಾಪದ ಶಾಪ ಇನ್ನೆಂದಿಗೂ...

Comments

Popular posts from this blog

Reunited...at last..

ಕಾಗೆ....

The Crow.