ದೈನಂದಿಕ ಚಟುವಟಿಕೆಯ ಹೊರೆ ಹೊರಬೇಕಿದೆ ಇನ್ನು
ಕಾಲಿನ ಸಹಕರ್ಮಿ ಕೈ, ಉಸ್ತುವಾರಿಯ ಆಶ್ವಾಸನೆ ನನ್ನಿಂದ
ಕೈ ಕಟ್ಟಿಕೊಂಡು ಕುಳಿತಿರಲಿಲ್ಲ, ನನ್ನ ಕೈ
ನಡಿಗೆಯಲಿ ತಾನು ಆಗಿತ್ತು ಭಾಗಿ, ಗುನುಗಾಡಿದ ತೋಳು
ಭುಜ ಸೂಚಿಸಿತ್ತು ತನ್ನ ಸಂಪೂರ್ಣ ಸಹಮತ,
ಕೈ ಪಕ್ಷಪಾತಿ ಎಂದು ಕೂಗಿತ್ತು ಕಾಲು ತೀವ್ರ ಕೋಪದಲ್ಲಿ
ಮೂಕ ತಟಸ್ಥ ಮೌನಕ್ಕೆ ಶರಣು ದೇಶಾವರಿ ನಗುವಿನಲ್ಲಿ,
ಗೊತ್ತಿತ್ತು ನನಗೆ ಇನ್ನೆಲ್ಲ ಕಾಯಕಕೆ ಕೈ ಖಂಡಿತಾ ಅನಿವಾರ್ಯ
ಮನೆಯ ಬಚ್ಚಲುಕೋಣೆಯಿಂದ ಕಛೇರಿಯ
ಮೇಜಿನ ಮೇಲಿನ ಮೋಜು ಸಕಲ ಕರ್ಮಗಳು,
ತೊಳೆಯುವುದು, ಒರೆಸುವುದು, ಬಳೆಯುವುದು, ಬೆಳಗುವುದು,
ಬರೆಯುವುದು, ಟೈಪಿಸುವುದು, ಉದರ ಪೋಷಿಸುವುದು
ಬಾಯಿಗೆ ಬಡಿಸುವವರೆಗೂ ಡ್ಯೂಟಿ ತಪ್ಪಿದ್ದಲ್ಲ ಕೈಬೆರಳಿಗೆ.
ಫೈಲ್ ಸಾಗಣೆ ಕಛೇರಿಯಲ್ಲಿ ಅನಿವಾರ್ಯ, ಸಹಿಹಾಕಲೇ ಬೇಕು
ಹುರಿದುಂಬಿಸಿಹೇಳಿದೆ, "ಸ್ವಂತ ಕೆಲಸವೇ ದೇವರಸೇವೆ,
ಮುಕ್ತನಾಗುವೆ ನಿನ್ನ ಪಾಳಿಯ ಸರದಿಯ ನಂತರ,
ತಪ್ಪಿದ್ದಲ್ಲ, ಮಾಡಲೇಬೇಕಿರುವ ಕೆಲಸ, ಖುಷಿಯಿಂದಾಗಲಿ"
ಸಿಕ್ಕಿದ್ದು ಮಾತ್ರ ನಿರುತ್ಸಾಹದ ಪ್ರತಿಕ್ರಿಯೆ ಕೈ ಕಡೆಯಿಂದ.
ನಿಲ್ಲದ ಕೈ ಗೊಣಗಾಟ, ವಿಶ್ರಾಂತಿ ತನಗೆಲ್ಲಿ? ಮರಗಟ್ಟುವ ವರೆಗೂ,
ದೋಷಾರೋಪ ಮಹಾ ಪಕ್ಷಪಾತಿ....ನನ್ನದೇ ಸತತ ಗುಣಗಾನ,
ನಾಲಿಗೆ ಇಲ್ಲದ ನನ್ನ ಕೈ ಯಿಂದ ನನಗೆ ಛಿಮಾರಿ,
ಕೆಲಸ ಪ್ರಿಯವಾಗದು ಯಾರಿಗೂ, ತಿಳಿದಿರುವ ವಿಷಯ ಸಕಲರಿಗೂ.
ಕೈತೊಳೆದು, ಶುಚಿಮಾಡಿ, ಜೋಡಿಸಿ ಅವುಗಳ ಜಾಗದಲ್ಲಿ,
ಕಳಿಸಿದೆ ವಿರಮಿಸಲು, ಪುಸಲಾಯಿಸಿ ಕೈ ಅನ್ನು,
ಎಲ್ಲ ಮುಗಿದಾಗ, ಏಕಾಂತದಲ್ಲಿ ಶುರು ನನ್ನಜೊತೆ
ತಪ್ಪಿಸಿಕೊಳ್ಳಲಾಗದ ಮಿದುಳಿನ ಸಲ್ಲಾಪ ಜುಗಲ್ ಬಂದಿ
ತಲೆ ತನ್ನ ಭರಾಟೆಯಲಿ ತೆಗೆದುಕೊಂಡಿತು ನನ್ನ ತರಾಟೆ
ಎಲ್ಲರೊಟ್ಟಿಗೆ ಎಲ್ಲ ಕ್ರಿಯೆಗಳಲಿ ಕೈಜೋಡಿಸಿ ಸುಸ್ತಾಗುವುದು ತಾನೇ.
ಕಣ್ಣು ಕರೆಯುತ್ತಿದೆ ಬಾಗಿಲು ಹಾಕಲು, ಕಿವಿ ಅಂಗಲಾಚಿದೆ ಚಿಲಕ ಹಾಕಲು
ಕೈ ಕಾಲು ಚಾಚಿವೆ ನಾಚಿಕೆಇಲ್ಲದೆ ನಿರ್ಜೀವದೇಹದಂತೆ
ಈಗಾಗಲೇ ಎಲ್ಲರೂ ನಿಷ್ಕ್ರಿಯ, ತನಗೂ ವಿಶ್ರಾಂತಿ ಅನಗತ್ಯವಲ್ಲ
ತೀವ್ರ ಅಸಮಧಾನ ಹೊರ ಹಾಕಿದ ಮಿದುಳು ಕೆಲಸದಹೊರೆ ದೂರು.
ದಿನಪೂರ್ತ ಚಟುವಟಿಕೆಯ ಮೇಲುಸ್ತುವಾರಿ ತಾನೇ ಎಂದು
ಮುಂದುವರೆದ ಮಸ್ತಿಷ್ಕದ ವಟವಟದ ಕಾಟ.
ಹೌದು, ನಿಜ ಅನ್ನಿಸಿತು ನನಗೆ, ಶಿರ ಹೇಳುವುದು ಸರಿ,
ಬಲವಂತದಲಿ ಸುಸ್ತಾಗುವುದು ಬೇಡ. "ನೀನು ರೆಸ್ಟ್ ಮಾಡು"
ಆಯಾಸ ಒಳಿತಲ್ಲ, ನನ್ನ ಒಳಿತಿಗೆ" ಮುನುಗಿದೆ ನಾನು.
ಔಪಚಾರಿಕವಾಗಿ ಮಿದುಳು ಕೇಳಿತು,
"ಮತ್ತೆ ನೀನು"?
"ನಾನಾ??? ಉದ್ಗಾರದಲಿ, ಮೌನ ನಿರುತ್ತರ ಧಿರ್ಘ ,
ಯೋಚಿಸಿಲ್ಲ ಇಲ್ಲಿಯವರೆಗೂ ವಿಶ್ರಾಂತಿಯ ಬಗ್ಗೆ
ನನಗೆ ಆ ಹಕ್ಕಿಲ್ಲ ಉಸಿರುನಿಲ್ಲುವವರೆ, ನಿಮ್ಮಗಳ ಹಾಗೆ.
ಕಾಯಕವೇ ಕೈಲಾಸ ಸೂತ್ರ, ತಂತ್ರ ಮತ್ತದೇ ಮಂತ್ರ
ನಿಲ್ಲದೆ ಬಡಬಡಿಸುವ ಎದೆಯಲ್ಲಿನ ಯಂತ್ರ
ಅತಂತ್ರವಾಗುವ ವರೆಗೆ ಈ ಮಹಾಬಯಲಲ್ಲಿ...
ಸಕಲವೂ ಪರತಂತ್ರ....
Comments