ಫುಟ್ ಬಾಲ್ 28-10-18


ವಿಶ್ವ ಫುಟ್ಬಾಲ್ ಪಂದ್ಯ ನಡೆಯುತ್ತಿದೆ ಕ್ರೀಡಾಂಗಣದಲ್ಲಿ.ಕಿಕ್ಕಿರದ ಜನ, ಕಿವಿಗಡಚುವಂತಹ ಸದ್ದು....ಹುಚ್ಚೆದ್ದ ಅಂತರಾಷ್ರ್ಟೀಯ ಪ್ರೇಕ್ಷಕರ ಕಿರುಚಾಟ,ಸದ್ದು, ಪದವಾಗದ ಅರ್ಥಹೀನ
ಧ್ವನಿ,ತಿಳಿಯುತ್ತಿಲ್ಲ,ಯಾರಿಗೂ.ಯಾರಿಗೆ,ಯಾರಿಂದ,ಪ್ರೋತ್ಸಾಹನಿರುತ್ತೇಜನ?ಹುರಿದುಂಬಿಸುವ ಜಯಕಾರ ಸಮರವೀರರಿಗೆ, ಮೊಳಗಿದ ಯುದ್ಧಘೋಷಣೆ, ಏನೂ ಕೇಳುತ್ತಿಲ್ಲ.
ವಿಶಾಲ ಹಸಿರು ಹಾಸಿಗೆಯ ಮೈದಾನದಲ್ಲಿ,ಎರಡು ಗೋಲು ಪೋಸ್ಟ್ಗಳಿವೆ ವಿರುದ್ಧದಿಕ್ಕಿನಲ್ಲಿ.ಅವೆರಡರ ನಡುವೆಯೇ ನಡೆದಿರುವ ಆಟ,ಹೇಗೆ ತಲುಪಿದರೂ ಎರಡು ಗುರಿಕಂಬಗಳ ನಡುವಿನ, ಖಾಲಿತನವನ್ನ ತಲುಪಲೇ ಬೇಕು.ಗೋಲುಬಲೆ, ಗೋಲುರಕ್ಷಕನಿಗೆ ಮಾತ್ರ.ಜಾಗಕದಲದ ದಿಗ್ಭಂದನ.ಬಲೆಯಲ್ಲಿ ಚೆಂಡು ಹಾಕುವುದೇ ಗೆಲುವು,ಚೆಂಡು ತಡೆಯದಿರುವುದೇ ಸೋಲು.ಇದು ಕ್ರೀಡಾನಿಯಮ, ಪೈಪೋಟಿ, ಅದಕ್ಕಾಗಿಯೇ ಇಲ್ಲಿ ಈಗ ನಡೆದಿರುವ ಮಹಾಸಮರ, ಖಾಲಿ, ಬರಿಗೈಲಿ ತಲುಪವಂತಿಲ್ಲ, ತಾವೂ ಹೋಗುವಹಾಗಿಲ್ಲ. ಹೋದರೂ ನಗಣ್ಯ, ಅದು ಗೋಲಲ್ಲ.ಆ ಬಲೆಯೊಳಗೆ, ಕೇವಲ ಚೆಂಡುಮಾತ್ರ ಕಳಿಸಬೇಕು.ಔಟಾದರೂ ಪರವಾಗಿಲ್ಲ, ಗಡಿರೇಖೆ ಬಿಟ್ಟು.
ಕ್ಷೇತ್ರ ಗೋಲ್ ಹೊಡೆಯಬಹುದು ಎಲ್ಲಿಂದಾದರೂ ಮೈದಾನದಲ್ಲಿ, ದಿಕ್ಕುಮಾತ್ರ ಪರಸ್ಪರ ವಿರುದ್ಧವಿರಬೇಕು ಅಷ್ಟೇ! ಅಥವಾ ಒಬ್ಬರಿಂದ ಒಬ್ಬರಿಗೆ ಪಾಸ್ ಕೊಟ್ಟು ಇನ್ನೊಂದು ಪಕ್ಕಕ್ಕೆ ತಂದು,ಗೋಲ್ ಸಮೀಪ ಸಮಯಸಾಧಿಸಿ, ಕೋಟೆ ಭೇದಿಸಿ ಚೆಂಡನ್ನು ನುಗ್ಗಿಸಬೇಕು.ಇವೆಲ್ಲವೂ, ಆದರೆ ಕಾಲಿಂದ ಮಾತ್ರ.ಕೈ,ಮೈ ಮನಸಿಗೆ ತಾಕುವಂತಿಲ್ಲ, ಶತ್ರುಪಾಳೆಯದ ಮಾನವ ಗೋಡೆಯ ಬೀಳಿಸಿ, ಮುನ್ನುಗ್ಗುವುದು ಕಷ್ಟ.ಆಕ್ರಮಣ, ಅತಿಕ್ರಮಣ, ಎಲ್ಲವೂ ಇಲ್ಲಿ ನಿಯಮಬಾದಿತ. ಏಳಲೂ ಬಹುದು, ಬೀಳಲೂಬಹುದು, ಚೆಂಡಿನಹಿಂದೆ ಬಿದ್ದು, ತಲೆಯಿಂದ ಗುದ್ದಲೂ ಬಹುದು, ಕಾಲುಕೊಟ್ಟು ಬೀಳಿಸಬಹುದು, ಅಂಪೈರ್ ನ ಅರಿವಿಗೆ ಬಾರದಂತೆ. ಫೌಲ್ ಆಗಬಹುದು, ಪೆನಾಲ್ಟಿ ಇದೆ.ಹೊರಗೆ ಕಳಿಸಬಹುದು ಆಟಗಾರನನ್ನು. ಓಟಪ್ರಧಾನ ಪಂದ್ಯ, ಹೆಜ್ಜೆ,ಹೆಜ್ಜೆಗೂ ಶತ್ರು ತೊಡಕು.ತೊಡರುಗಾಲು, ಹಾಕುತ್ತಾ,ಏಳುತ್ತ, ಬೀಳುತ್ತ ಗೋಲು ಸಮೀಪಿಸುವುದೇ ರೋಮಾಂಚನ.ಮೈನವಿರೇಳುವ ಕುತೂಹಲ, ತಂಡಬೇಧವಿಲ್ಲದೆ ಗೋಲು ತಡೆಯಲು, ರಕ್ಷಿಸಲು ಗುಂಪಾಗುತ್ತಾರೆ ಒಬ್ಬರಿಗೊಬ್ಬರೂ ತಾಕಿಕೊಂಡುಕುರಿಗಳಂತೆ. ! ಎಲ್ಲರೂ ಅಲ್ಲೇ. ಆ ಒಂದು ಚೆಂಡಿನಹಿಂದೆ ಮುಂದೆ.
ಈ ಪಂದ್ಯದಲ್ಲಿ ಅವನೊಬ್ಬ ಆಟಗಾರ. ಭರವಸೆಯ ಶಕ್ತಿಯುತ ಪಟು. ಆಪಧ್ಬಾಂದವ,ಸೋಲು, ಗೆಲುವಿನ ನಿರ್ಧಾರಕ ಪಾತ್ರ.ತಂಡದಲಿ ಅತಿಪ್ರಮುಖಸ್ಥಾನ ಸ್ಟ್ರೈಕರ್, ಫುಲ್ ಸೆಂಟರ್. ಎಲ್ಲಿಬೇಕಾದರೂ ನುಗ್ಗಬಹುದು, ಪಕ್ಕ ಬದಲಿಸಬಹುದು.ಆಫ್ ಸೈಡ್ ಆಗುವ ಭಯವಿಲ್ಲ.ಇತರ ರಕ್ಷಕ ಪಟುಗಳಂತೆ ಲಕ್ಷ್ಮಣರೇಖೆಯ ಹಂಗಿಲ್ಲದೆ. ಆಯಾಸ ಅನಿವಾರ್ಯ,ಜವಾಬ್ದಾರಿ ಜಾಸ್ತಿ, ಪಂದ್ಯ ಶುರುವಾಗಿದೆ. ಸಮಯದ ಪರಿವೆ ಯಾರಿಗೂ ಇಲ್ಲ. ಎಲ್ಲರೂ ತಮ್ಮ ಉತ್ಸಾಹದಲ್ಲೇ ತಲ್ಲೀನ.ಮೈದಾನ ಮಧ್ಯದಿಂದಲೇ, ಯಾರದೋ ಕಾಲಿನ ಹೊಡೆತಕ್ಕೆ ಗತಿಪಡೆದು ಹೊರಟ ಚೆಂಡು. ಇನ್ನೂ ಯಾವಗೋಲನ್ನೂ ಭೇದಿಸಿಲ್ಲ.ಕಾಲುಗಳ ಘರ್ಷಣೆಯಲ್ಲೇ ನಿಲ್ಲದ ಚೆಂಡಿನ ಚಲನೆ ಎಲ್ಲ ದಿಕ್ಕಲ್ಲಿ, ಕೆಲವೊಮ್ಮೆ ಮೈದಾನದಿಂದಾಚೆ, ಕೈಹೊಡೆತದಿಂದ ಮರಳಿ ಬಂದು ಮತ್ತೆ ಉರುಳುತ್ತಲೇ ಇದೆ ತನ್ನ ಪಯಣದಲ್ಲಿ.ಯಾರಕಾಲಿಗೆ, ಯಾರವೇಗಕೆ, ಯಾರ ಕಾಲ್ಚಳಕಕ್ಕೆ, ಬಲಿಯಾಗುವುದೋ? ಯಾರ ಕಲಾತ್ಮಕ ಹೊಡೆತಕ್ಕೆ ಒಲಿಯುವುದೋ? ಸ್ವೇಚ್ಛೆತಿರುಗುವ ಚೆಂಡು, ಪಾದದ ದಿಕ್ಕಿಗೆ, ಶಕ್ತಿಗೆ, ವೇಗಕ್ಕೆ. ಸೂಕ್ತ ಕಲಾತ್ಮಕ ಪ್ರತಿಕ್ರಿಯಿಸುವ ಪಕ್ಷಾತೀತ ಗೋಳ.
ತಾನೊಬ್ಬ ತಂಡದ ಸದಸ್ಯ, ಅಂಟಿಸಿಕೊಂಡು ಕಾಲಿಗೆ ಚೆಂಡು, ಎಲ್ಲರ ದುಷ್ಟ, ನಿರ್ದಯ ಕಾಲುಗಳಿಂದ ರಕ್ಷಿಸಿ, ತಾನೂ ಬೀಳದೇ ಯಾರಿಗೂ ಪಾಸ್ ಕೊಡದೆ, ಓಡುತ್ತಲ್ಲೇ ಪೂರ್ಣ ಮೈದಾನ ಸವೆಸಿ, ಮುಗಿಸಿ, ಒಬ್ಬನೇ ಎದುರಾದ ಗೋಲುಕಂಬಗಳ ನಡುವೆ ನಿಂತ ಗೋಲುರಕ್ಷಕನ ಮುಂದೆ.ಹಿಂದೆ ಹತ್ತಾರು, ಪಟುಗಳು, ವಟಗುಡುವ ನಿಶ್ಯಭ್ದ, ಕಿರುಚಾಟ.ದೂರದಿಂದಲೇ ನಿರ್ದೇಶಿಸುತ್ತಾನೆ, ತರಬೇತುದಾರ ಹುರಿದುಂಬಿಸುತ್ತಾನೆ ಆತಂಕದಲ್ಲಿ. ಮುಗಿಲು ಮುಟ್ಟಿದ ಪ್ರೇಕ್ಷಕರ ಚೀರಾಟ,ಬಯಲಲ್ಲಿ ಗೋಲು, ಗೋಲು,ಗೋಲ್!
ಕಾದಿದೆಯೋ ಯಾರಿಗೆ ಸೋಲು? ಗೋಲುರಕ್ಷಕನ ವಿಚಿತ್ರ ನೋಟ! ಭೀತಿಯೇ! ಅನುಮಾನವೇ?.ನರ್ತಕನಂತೆ, ಕುಣಿಯುತ್ತಿದ್ದಾನೆ, ಶಿವತಾಂಡವದಲ್ಲಿ.ಬೆದೆಗೊಳಗಾದ ಗೂಳಿಯಂತೆ, ದುರುಗುಟ್ಟಿ, ಮನಸ್ಥೈರ್ಯ ಮರಗಟ್ಟಿಸುವ ಪಿತೂರಿ.ನಿರ್ಭಾವ ಕಣ್ಣಲ್ಲಿ, ಆಳ ಪಾತಾಳದಲ್ಲಿ ಅಸಹಾಯಕ ಶೂನ್ಯ.
ತಡೆದು ನಿಲ್ಲಸಬೇಕಿದೆ ಉರುಳಿ,ಉರುಳಾಗುವ ಚೆಂಡನ್ನು, ಬದಲಿಸಬೇಕಿದೆ ಅದರ ದಿಕ್ಕನ್ನು,ನಿಯಂತ್ರಿಸಿ ವೇಗವನ್ನು, ಕಂಬಗಳ ನಡುವಿನ ವಿಸ್ತಾರ ನಿರ್ವಾತ, ಅತಿ ವಿಶಾಲ ವಿಶ್ವದ ಬಯಲು. ಹಿಗ್ಗಿ,ನುಗ್ಗಿ, ಮುನ್ನುಗ್ಗಿದರೂ ತಲುಪಲಾರದ ನಿರ್ವಾತ. ಏರಲಾರದ ಆಳ, ಹೊರಳಲಾರದ ದೂರ. ಗುರಿ ವಿಜಯ ಕೇಂದ್ರ, ರಕ್ಷಿತ ಕ್ಷೇತ್ರ. ಕಾವಲುಗಾರ ಕಾದಿದ್ದಾನೆ ಹದ್ದಿನಂತೆ. ಕೇವಲ ಕ್ಷಣಗಳು, ನಿಶ್ಚಲನಿಂತ ಸಮಯ, ಅನೂಹ್ಯ ವಿಕಸನ ವಾಮನನಂತೆ ಬ್ರಹ್ಮಾಂಡವೆಲ್ಲ ಆವರಿಸಿ. ಅತನ ನಡುವೆ, ಲಂಬರೇಖೆಯ ಸಂಗಮದೂರದಲಿ ಯಶಸ್ಸು. ತಳಬಿಟ್ಟು ಹುಚ್ಚೆದ್ದ ಜನ, ಬಾವುಟಗಳ ಹಾರಾಟದಲಿ, ನಿಲ್ಲದ ಹರ್ಷೋದ್ಗಾರ, ಉನ್ಮಾದ, ಉತ್ತೇಜನ ಗೀತೆ. ಹೃದಯದ ಬಡಿತ ಉದ್ವೇಗದಲಿ ಪ್ರೇಕ್ಷಕರೆಲ್ಲರಲಿ ಪ್ರಳಯ ಪ್ರತಿಧ್ವನಿತ ಕಂಪನ. ನೀಳ ಉಸಿರೆಳುದು, ಪ್ರತಿಕೋಶದಲಿ ಗಾಳಿ ತುಂಬಿ, ಕೋಶಾಂತರದಲ್ಲೇ ಶಕ್ತಿ ಪಸರಿಸಿ ಅಭಿಸರಣ. ದಹನಾನುಕೂಲಿ ವಾಯು ದಹಸಿ, ಶಕ್ತಿ ಉತ್ಪತ್ತಿ,ಸ್ಥಿತಿಸ್ಥಾಪಕತ್ವ ಸ್ನಾಯು ಪ್ರಚೋದಿತ, ಪರಾವರ್ತಿತ ಪ್ರತಿಕ್ರಿಯೆ. ಕಾರ್ಯನಿರತ ಕಾಲು, ತಕ್ಷಣ ಸ್ವೀಕರಿಸಿ ಸವಾಲು,ಕಣ್ಣೆರಡು ಒಂದಾಗಿ, ಗೋಲುರಕ್ಷಕನೇ ಅದೃಶ್ಯ. ಏಕಾಗ್ರತೆ!! ಕೇವಲ ದೃಷ್ಟಿಯುದ್ಧ, ಶಕ್ತಿಆವಾಹನೆ ಎಡಗಾಲ ಅಂಗಾಲೆತ್ತಿ, ಕಾಲ್ಬೆರಳ ತುದಿಯಿಂದ ಅಳೆದ ಕೋನ, ಸಮಾಧಾನದಲಿ ದೂರ ನಿರ್ಧರಿಸಿದ ದೂರಮಾಪಕ ಮಿದುಳು
ಜಾಡಿಸಿ ಒದ್ದಾಗ ಚೆಂಡು ಪ್ರಪಂಚವೇ ಸ್ಥಬ್ಧ, ಕ್ಷಣಕಾಲ ನಿಶ್ಯಬ್ದ.ಗೋಲು ಕಾವಲುಗಾರ ಹುಡುಕುತ್ತಿದ್ದಾನೆ ಬಲೆಯಲ್ಲಿಚೆಂಡು, ಹೆಮ್ಮೆಯಲಿ ತಾನೊಮ್ಮೆ ನೋಡಿದ ಭರವಸೆಯ ಸ್ಟ್ರೈಕರ್. ಗುರಿ ಸೇರಿಸಿ ಬಾಲು, ಮಾಡಿಯಾಗಿದೆ ಗೋಲು, ಧೃಡಪಟ್ಟಗೆಲವಿನ ಆತ್ಮವಿಶ್ವಾಸದ ಉನ್ಮಾದ! ಆದರೆ......ಅಂಪೈರ್.... ಗೋಲಾದ ಸೀಟಿ ಊದಿಲ್ಲ, ಯಾವ ಸಂಕೇತ ಸಾರಿಲ್ಲ. ದಿಗ್ಭ್ರಮೆ, ಕ್ರೀಡಾಂಗಣ ಸ್ಥಬ್ಧ. ಹಿಂದೆ ಮುಂದೆ,ಮೇಲೆ ಕೆಳಗೆ ನೋಡಿದರೂ, ಯಾರು ಕಾಣುತ್ತಿಲ್ಲ. ತಲೆತಗ್ಗಿಸಿ ಹುಡುಕಿದ ಚೆಂಡನ್ನು ಎಲ್ಲದಿಕ್ಕುಗಳಲ್ಲಿ ಆತಂಕದಲಿ ಪ್ರಹಾರಕ ಪಟು. ಗೋಲಲ್ಲೂ ಗೋಚರಿಸಿದ ಚೆಂಡು, ಮೈದಾನಬಿಟ್ಟು ಮರೀಚಿಕೆಯಾಗಿರುವುದಾದರೂ ಹೇಗೆ?
ತಲೆತಗ್ಗಿಸಿ ಜಿಗುಪ್ಸೆಯಲಿ ಕರ್ಣನ ನೋಟ. ಕಂಡ ದೃಶ್ಯ...ಶಪಿತ ಪಿಂಡ, ತನ್ನದೇ ಕಡಿದ ರುಂಡದಂತೆ.....ಆತನಕಾಲೆದುರೇ ಕುಳಿತು ನಿಶ್ಚಲ ಮಂದಹಾಸ ಬೀರಿ ವಿಶ್ರಾಂತಿ ಪಡೆದಿದೆ ತನ್ನ ನಿಲ್ಲದ ಭ್ರಮಣೆಯ ಬವಣೆಯಿಂದ, ಆತ್ಮವಿಶ್ವಾಸಿ ಆಟಗಾರನ ಕಾಲಿನ ಮಾರಕ ಹೊಡೆತತಪ್ಪಿಸಿಕೊಂಡು. ಕೃತಜ್ಞತಾ ಭಾವನೆಯಲಿ ಕುಳಿತಿದೆ ಅತಿ ವಿನಯದಿಂದ ಮತ್ತಾರ ಕಾಲಹೊಡೆತ ಕಾದು. ಗೊತ್ತಿದೆ, ನಿಶ್ಚಲತೆಯ ಜಡದಲ್ಲಿ ತನ್ನ ಅಸ್ತಿತ್ವ ವೇ ಮಾಯ.
ಹುರುಪಿನ, ನಿರಾಸೆಯಲ್ಲಿ ಕೋಲಾಹಲ ಕ್ರೀಡಾಂಗಣದಲಿ ಮುಂದುವರಿದಿದೆ ಮತ್ತೆ ಪಂದ್ಯ ಇನ್ನು ಡ್ರಾ ಸ್ಥಿತಿಯಲ್ಲೇ....

_________________________________________________________________________________


23-11-18.
ಅಭಿವ್ಯಕ್ತಿ ವೃತ್ತಿಯಾದಾಗ, ತೀವ್ರತೆ
ಹಾಗು ಪ್ರಾಮಾಣಿಕ ಸೃಜನಶೀಲತೆ 
ದಾರಿತಪ್ಪಿ ಕೇವಲ ಸುದ್ಧಿಯಾಗುತ್ತದೆ.
ಗ್ರಹಿಕೆ, ಸ್ಪಂದನೆಗಳ ನಡುವಿನ ಅಂತರ 
ಸಾಮಾಜಿಕ ಸ್ವಾಸ್ಟ್ಯಕ್ಕೆ ಹಿತಕರ.
___________________________________________________________________________________

ಗೋಡೆ.
ಸಮಯಕ್ಕೆ ತಕ್ಕಂತೆ, ಅನುಕೂಲಕ್ಕನುಗುಣವಾಗಿ
ಕಟ್ಟಿನಿಲ್ಲಿಸಬಹುದು
ಗೋಡೆಗಳನ್ನು ಎಲ್ಲದರ ವಿಭಜನೆಯಲ್ಲಿ
ಎಲ್ಲ ಕಡೆಯಲ್ಲೂ.
ನಿರ್ಮಾಣ ಸಾಮಗ್ರಿಗಳ ಹೇರಳ ಲಭ್ಯತೆಯಲ್ಲಿ
ಎತ್ತರಕ್ಕೆ ಮಿತಿ ಇಲ್ಲ, ವಿವಿದತೆಗೆ ಕೊರತೆಇಲ್ಲ
ತಂತ್ರಜ್ಞಾನ ನವೀನ ಕಲಾಪ್ರಜ್ಞೆಯನ್ನು ಕೆಣುಕಿದಾಗ
ಅಗಲ, ಆಳ,ವರ್ಣಮಯ ವಿನ್ಯಾಸಗಳು
ದೃಶ್ಯಗ್ರಹಿಕೆಗೆ ಎಟುಕದೆ ದೃಷ್ಟಿದೋಶ
.
ಎಷ್ಟೋ ಸುತ್ತಿನ ಕೋಟೆಯಲಿ
ಒಳ ಕೇಂದ್ರ ಪದರ ಪಾರದರ್ಶಕ ಭಿತ್ತಿ
ಗೋಚರಿಸುವುದಿಲ್ಲ ಸಾಮಾನ್ಯದೃಷ್ಟಿಗೆ
ಯಾವ ಯಂತ್ರಕ್ಕೂ ಎಟುಕುವುದಿಲ್ಲ,
ಯಾವ ಮಂತ್ರಕ್ಕೂ ಮುಕ್ಕಾಗುವುದಿಲ್ಲ
ಪುರಾತನ, ಪೌರಾಣಿಕ, ಐತಿಹಾಸಿಕ ಗೋಡೆ
ಮಜಬೂತಾಗಿದೆ ಪ್ರಾಚೀನ ಗಾರೆಯ ತೇಪೆಯಿಂದ
ಧೂಳೆಬ್ಬಿಸದೆ, ಬೀಳಿಸಿ,ನಿರ್ಣಾಮ ಮಾಡುವುದು
ನಿಶ್ಯಭ್ದದಲಿ ಅಸಾಧ್ಯ, ಸುಲಭವೂ ಅಲ್ಲ
ತಮ್ಮ ಕೋಶದಲಿ ಅಧಿಕಾರನಡೆಸುವ ಸಾಮ್ರಾಜ್ಯಶಾಹಿಗಳು
ಗೋಡೆಗಳ ಒಳಗೆ, ಗೋಡೆ ಎಣಿಸಿ ಶ್ರೇಷ್ಟತೆಯ ಅಳೆಯುವರು.
ಗೋಡೆಗಳಿಲ್ಲದೆ ನಗ್ನತೆಯ ಕಳವಳ ಮುಸುಕಿನಲಿ
ಮುಖದ ಕಣ್ಣುಗಳಿಗೂ ಪೊರೆಬೆಳದಿದೆ.
ಏಕೋ ? ಇತ್ತೀಚೆಗೆ ನೇತ್ರತಜ್ಞರ ಕೊರತೆ
ಮಸುಕಿನ ಅಸ್ಪಷ್ಟತೆಯಲಿ
ಎಲ್ಲವೂ ಸಮರ ಸುಂದರ.
ಈಗ ಗೋಡೆ ಎಲ್ಲರಿಗೂ ಅನಿವಾರ್ಯ
ಗೋಡೆ ಕೆಡವುವ ಆತ್ಮಸ್ಥೈರ್ಯ ಯಾರಿಗೂ ಇಲ್ಲ
ಅನಿವಾರ್ಯವೂ ಅಲ್ಲ,
ಬಿದ್ದರೆ ಭಿತ್ತಿ, ಭೀತಿ ಬಟಾಬಯಲಲ್ಲಿ
ನಿರ್ಲಜ್ಯ ವಿಶ್ವದಲಿ ಎಲ್ಲರೂ ನಗ್ನ....
___________________________________________________________________________________

Comments

ಕನ್ನಡವನ್ನು ಆಯ್ಕೆ ಮಾಡಿ

ಕನ್ನಡದ ಅರಮನೆಗೆ ಬರಲು ತಮಗೆ ಆದರದಿಂದ ಸ್ವಾಗತಿಸುತ್ತೇವೆ... :pray:
ಕನ್ನಡವನ್ನು ಉಳಿಸಿ, ಬೆಳೆಸಿ..
..
https://Www.spn3187.blogspot.in
(already site viewed 1,33,487+)
and
https://T.me/spn3187
(already joined to this group 487+)
Share your friends & family also subcrib (join)

Popular posts from this blog

ಕಾಗೆ....

Reunited...at last..