ಸ್ಮಶಾನಗಳೇ ನಗರಗಳಾಗಬಹುದು.




ಇತ್ತೀಚೆಗೆ ಎಲ್ಲೋ ಓದಿದ ನೆನಪು....

ಸತ್ತ ಹೆಣಗಳನ್ನು ಹೂಳುವುದು ಮತ್ತು ಸುಡುವುದರಬಗ್ಗೆ.

ಸುಡುವುದರಿಂದ ಪರಿಸರ ವಾಯು ಮಾಲಿನ್ಯ ವಾಗುತ್ತದೆ ಮತ್ತು ಹೂಳುವುದರಿಂದ ಮಣ್ಣಿನ ಫಲವತ್ತತೆ ಹೆಚ್ಚಾಗುತ್ತದೆ, ಆದುದರಿಂದ ಹೂಳುವುದೇ ಪರಿಸರಸ್ನೇಹಿ ಸಂಸ್ಕಾರ ಪಧ್ದತಿಯೆಂದು ಪ್ರತಿಪಾದಿಸುವಂತಹ ಒಂದು ಲೇಖನ ನೋಡಿದೆ. ಆಗ ಅನಿಸಿದ್ದು.
ಹೂಳುವುದು ಉತ್ತಮ ಎಂಬ ಅಭಿಪ್ರಾಯ ಹಾಗೂ ಹೆಚ್ಚು ಚಾಲ್ತಿಯಲ್ಲಿರುವ ಮಾನವನ ಸಾಮಾನ್ಯ ಧಾರ್ಮಿಕ ಅಂತಿಮ ಸಂಸ್ಕಾರ ಪದ್ದತಿ. ಸಾವಿನ ನಂತರ ದೇಹದ ಸಾವಯವ ಅಂಶಗಳು ಸುಕ್ಷ್ಮಾಣು ಬ್ಯಾಕ್ಟೀರಿಯಾ ಕ್ರಿಯೆಗಳ ಮೂಲಕ ಸರಳ ನಿರವಯ ರಾಸಾಯನಿಕ ವಸ್ತುಗಳಾಗಿ ವಿವಿಧ ಹಂತಗಳಲ್ಲಿ ವಿಘಟಿಸಲ್ಪಟ್ಟು ಪುನಃ ಮಣ್ಣು ಮತ್ತು ವಾತಾವರಣ ತಲುಪುವ ಕ್ರಿಯೆ ಕೊಳೆಯುವಿಕೆ. ಈ ನೈಸರ್ಗೈಕ ಕ್ರಿಯೆ ಕ್ರಮೇಣ ನಿಧಾನವಾಗಿ ನಡೆಯುವಂತಹ ಮಣ್ಣಿನಲ್ಲಿನ ಹಾಗೂ ನಮಗೆ ಕಾಣಿಸದಂತಹ ಸ್ವಾಭಾವಿಕ ಕ್ರಿಯೆಗಳು.
ಆದರೆ ಸುಡುವ ಶವಸಂಸ್ಕಾರ ದಹನಕ್ರಿಯೆಯಲ್ಲಿ, ದೇಹ ತಕ್ಷಣ ದಹಿಸಲ್ಪಟ್ಟು ಕ್ಲಿಷ್ಟ ಸಾವಯವ ಕೊಬ್ಬು, ಪ್ರೋಟೀನ್, ಪಿಷ್ಟ ಇತರ ಲವಣ ಮತ್ತು ಖನಿಜಳು ಸರಳ ನಿರವಯ ವಸ್ತುಗಳಾಗಿ ಒಡೆಯಲ್ಪಟ್ಟು ವಾತಾವರಣವನ್ನು ಸೇರುವ ಕ್ರಿಯೆ.
ಆದರೆ ಸುಡುವುದು ಮತ್ತು ಹೂಳುವುದು ಎರಡೂ ಸಹಾ ಸ್ವಾಭಾವಿಕ ಪರಿಸರ ಕ್ರಿಯೆ ಅಲ್ಲ. ಆದುದರಿಂದ ಎರಡು ವಿಧಾನಗಳಲ್ಲೂ ಪರಿಸರ ಮಾಲಿನ್ಯ ಉಂಟಾಗಲೇ ಬೇಕು. ಕಾರಣ ಎರಡೂ ವಿಧಾನಗಳು ಮಾನವ ಕೇಂದ್ರಿತ ಮತ್ತು ಮಾನವ ಪ್ರೇರಿತ ಮತ್ತು ಮಾನವ ಧಾರ್ಮಿಕ ಅಧಾರಿತ ಪದ್ದತಿ ಹಾಗು ವಿಧಾನಗಳು. ಹೀಗಾಗಿ ಈ ಸತ್ತದೇಹವನ್ನು ವಿಸರ್ಜಿಸುವ ಕ್ರಿಯ ನೈಸರ್ಗಿಕ ಕ್ರಿಯೆ ಅಲ್ಲ ಮಾನವನ ಸಾಂಸ್ಕೃತಿಯ ಕೃತಕ ಅನ್ವೇಷಣೆ. ಯಾವುದೇ ಜೀವಿ ಸಸ್ಯ, ಪ್ರಾಣಿ, ಜಲಚರ, ಮರುಭೂಮಿ ಇತ್ಯಾದಿ ಸಾಯುವ ಮಿಲಿಯಾಂತರ ಜೀವಿಗಳಿಗೆ ಯಾರು ಸಂಸ್ಕಾರ ಮಾಡುವುದಿಲ್ಲ. ಅಲ್ಲಿನ ಆವಾಸದ ಪರಿಸರದಂಶಗಳಿಗನುಗುಣವಾಗಿ ಕೊಳೆಯುವಕ್ರಿಯೆಗೆ ಒಳಗಾಗುತ್ತವೆ. ಅದೇ ಅದರ ಸಂಸ್ಕಾರ. ಈ ಕ್ರಿಯೆಯಲ್ಲಿ ಸತ್ತ ಜೀವಿಯ ದೇಹದ ಎಲ್ಲಾ ವಸ್ತುಗಳು ಸರಳ ಅಣುಗಳಾಗಿ ಪರಿವರ್ತನೆಗೊಂಡು ಮಣ್ಣು ಮತ್ತು ವಾತಾವರಣವನ್ನು ಸೇರಿ ಇನ್ನೊದು ಜೀವಿಗಳಿಗೆ ಆಹಾರ ಮತ್ತು ಪೋಷಕಾಂಷಗಳಾಗಿ ಮಹಾ ನಿಲ್ಲದ ಜೈವಿಕಚಕ್ರದಲ್ಲಿ ಸೇರಿಹೋಗುತ್ತವೆ.
ಇನ್ನು ಮಾಲಿನ್ಯ ಎನ್ನುವ ಪದ ಕೇವಲ ಮಾನವನಿಂದ ಮಾನವನಿಗಾಗಿ ಸೃಷ್ಟಿಯಾಗಿದೆ. ಪರಿಸರದಲ್ಲಿ ಇದಕ್ಕೆ ಅವಕಾಶವಿಲ್ಲ ಮತ್ತು ಅರ್ಥವಿಲ್ಲ. ಜ್ವಾಲಾಮುಖಿ, ಕಾಡ್ಗಿಚ್ಚು, ಭೂಕಂಪಗಳು, ರೋಗಗಳು, ಪ್ರವಾಹಗಳು ಇತ್ಯಾದಿ ವಿನಾಶಕಾರಿ ಪ್ರಾಕೃತಿಕ ಕ್ರಿಯೆಗಳು ಸಹಜ, ಸಾಮಾನ್ಯ, ಸ್ವಾಭಾವಿಕ ಹಾಗೂ ಪ್ರತಿಶತ ಪ್ರಾಕೃತಿಕ. ಜ್ವಾಲಾಮುಖಿಯಲ್ಲಿ ಉತ್ಪತ್ತಿಯಾಗುವ ಹೊಗೆ ಮತ್ತಿತರ ವಿಷಕಾರಿ ಅನಿಲಗಳು ಎಲ್ಲ ಜೀವಿಗಳಿಗೂ ಅಪಾಯ ಮನುಷ್ಯನಿಗೆ ಮಾತ್ರವಲ್ಲ.
ಕ್ರಕಟೋವಾ ಎಂಬ ಜಾವ ದ್ವೀಪಸಮುಹದಲ್ಲಿ ಆಗಸ್ಟ್ 26, 1883 ರಲ್ಲಿ ಸ್ಪೋಟಿಸಿದ ಜ್ವಾಲಾಮುಖಿಯಿಂದ ಉತ್ಪತ್ತಿಯಾದ ದಟ್ಟಹೊಗೆ, ಬೂದಿ, ಗಂಧದಡೈಆಕ್ಸೈಡ್, ಇಂಗಾಲದ ಡೈಆಕ್ಶೈಡ್ ಮತ್ತು ಮಾನಾಕ್ಸೈಡ್ ಮತ್ತು ಇನ್ನೂ ಹಲವು ವಿಷಕಾರಿ ಅನಿಲಗಳು ಅಸಂಖ್ಯಜೀವಿಯನ್ನು ಆಹುತಿ ತೆಗೆದುಕೊಂಡದ್ದಷ್ಟೇ ಅಲ್ಲ ಇಡೀ ಜಗತ್ತಿನಾದ್ಯಂತ ಮೋಡಕವಿದ ವಾತಾವರಣ ಸೃಷ್ಟಿಯಾಗಿ, ದಿನಗಟ್ಟಲೆ ಮುಂದುವರಿದು ಭೂಮಂಡಲದ ತಾಪವೇ ಎರಡು ಡಿಗ್ರಿ ಸೆಂಟಿಗ್ರೇಡ್ ನಷ್ಟು ಕಡಿಮೆ ಯಾಗಿತ್ತು. ಇದು ಪರಿಸರ ಮಾಲಿನ್ಯದ ಸ್ವಾಭಾವಿಕ ರೂಪ ಮತ್ತು ಪರಿಣಾಮ. ಕಾಡ್ಗಿಚ್ಚಿನಲ್ಲೂ ಹೇರಳ ಕಾರ್ಬನ್ ಡೈಆಕ್ಸೈಡ್ ವಾತಾವರಣವನ್ನು ಸೇರುತ್ತದೆ. ಅದನ್ನು ಮಾಲಿನ್ಯ ಎಂದು ಹೇಳಲು ಸಾಧ್ಯವಿಲ್ಲ.
ಈ ಪ್ರಕ್ರಿಯೆಗಳಲ್ಲಿ ಅಸಂಖ್ಯಜೀವಿಗಳು ನಾಶವಾಗುತ್ತವೆ. ಈ ನಾಶವೂ ನಾವಂದುಕೊಂಡಂತೆ ವಿನಾಶಕಾರಿ ಅಲ್ಲ. ತೀರ ಸಹಜವಾಗಿ ಘಟಿಸುವ ಭೌಗೋಳಿಕ ಮತ್ತು ಆ ಆವಾಸದ ಪರಿಸರವ್ಯವಸ್ಥೆಯ ವಿಕಾಸೀಯ ಪರಾಕಷ್ಟೆಯ ಹಂತವನ್ನು ಸ್ಥಿರಗೊಳಿಸುವ ಕ್ರಿಯೆ. ಮಹಾ ದೈತ್ಯ ಉರಗ ಡೈನೊಸಾರಸ್ ಗಳು ಸಹಾ ಪ್ರಾಕೃತಿಕ ವಿಧ್ವಂಸಕ ಚಟುವಟಿಕೆಯಲ್ಲಿ ಅಳಿದುಹೋದವು. ನಮ್ಮ ಜ್ಞಾನ ತೀರ ಸೀಮಿತ. ನಾವು ನೋಡದಂತಹ ಕೋಟ್ಯಾಂತರ ವಿವಿಧ ಪ್ರಭೇದದ ಜೀವಿಗಳು ಈ ಗ್ರಹದಲ್ಲಿ ಬದುಕಿ ಹೋಗಿವೆ. ಅಳಿದಿವೆ. ಆದರೆ ಪ್ರಕೃತಿ ಇನ್ನೊಂದು ಹೊಸ ರೂಪದಲ್ಲಿ ಬದಲಾಗುತ್ತಾ ಹೋಗುತ್ತದೆ. ನಾವು ಯಾವುದನ್ನು ನೈಸರ್ಗಿಕ ವಿನಾಶಕಾರಿ ಘಟನೆಗಳೆಂದು ಪಟ್ಟಿಮಾಡಿದ್ದೇವೋ ಅವು ನಮ್ಮ ಅಲ್ಪ ಅನುಭವದ ಪ್ರತೀಕ. ಹೊಸ,ಹೊಸ, ಪರಿಸರವ್ಯವಸ್ಥೆ ಸ್ಥಾನಪಲ್ಲಟಗೊಳ್ಳುತ್ತಲೇ ಇರುತ್ತವೆ. ಇದು ಪ್ರಕೃತಿಯ ನಿಲ್ಲದ ಕ್ರಿಯೆ ಮತ್ತು ನಿಯಮ. ಮಾನವ ಇದನ್ನು ಬದಲಿಸಲಾರ. ಬದಲಿಗೆ ದುರಂತವೆಂದರೆ ಅವನೊಬ್ಬನಷ್ಟೇ ಬಲಿಯಾಗದೇ ತನ್ನ ಅತೀ ಬುದ್ಧಿವಂತಿಕೆಯಿಂದ ಸುತ್ತಲಿರುವ ಎಲ್ಲಾ ಪರಿಸರದ ಅಂಶಗಳು ಮತ್ತು ಜೀವಿಗಳನ್ನು ಕ್ರೂರವಾಗಿ ನಿರ್ಲಕ್ಷಿಸಿ ನಿರ್ಮೂಲನ ಮಾಡಿ ತೀವ್ರ ಅಪಾಯಕ್ಕೆ ಗುರಿಮಾಡಿ ಅನೇಕ ಜೀವ ಪ್ರಭೇದಗಳು ಹೇಳಹೆಸರಿಲ್ಲದೆ ಮಾಡಿದ್ದಾನೆ. ಆದುದರಿಂದ ಮಾಲಿನ್ಯ ಎನ್ನುವ ಪದ ಕೇವಲ ನಮ್ಮಪ್ರಗತಿ, ವಿಕಾಸ ಎನ್ನುವ ಭ್ರಮೆಯಲ್ಲಿ ಅವತರಿಸಿದ ದುರಾಸೆ ಮತ್ತು ವೈಜ್ಞಾನಿಕ ಅವಿಶ್ಕಾರಗಳ ಅವೈಜ್ಞಾನಿಕ ಅಳವಡಿಕೆಯ ಫಲ. ಆದರೆ ಇದೂ ಸಹಾ ಪರಿಸರ ಸಂತುಲನ ಒಂದು ತಂತ್ರ ಅಷ್ಟೇ. ಮಾನವನ ವಕ್ರ ಬುದ್ಧಿ ಯಿಂದಲೇ ನಮಗೆ ಸೂಕ್ತವಲ್ಲದ ಹೊಸ ಪ್ರತಿಕೂಲ ಪರಿಸರ ವ್ಯವಸ್ಥೆ ಸೃಷ್ಟಿಯಾಗಬಹುದು.
ಇನ್ನು ನಮ್ಮ ಮಾನವ ಕೇಂದ್ರಿತ ಸಂಕುಚಿತ ವಿಶ್ಲೇಷಣೆಯನ್ನು ಗಮನಿಸಿದರೆ ಕಂಡುಬರುವ ಸತ್ಯ ಕೇವಲ ಕೆಲವೇ ಸಾವಿರ ವರ್ಷಗಳಲ್ಲಿ (ಸುಮಾರು ಎಂಟರಿಂದ ಹತ್ತು ಸಾವಿರ ವರ್ಷಗಳು) ಹಿಂದೆಂದೂ ಊಂಟಾಗದಂತಹ ಪ್ರಕೃತಿಗೆ ವಿರುಧ್ದವಾದ ಮಾನವ ಚಟುವಟಿಕೆಗಳೂ, ಸಂಶೋಧನೆ, ಆವಿಶ್ಕಾರಗಳು ಮತ್ತು ಉತ್ಪನ್ನಗಳು ಹೆದರಿಸಿಕೆ ಹುಟ್ಟಿಸುವಷ್ಟು ಅಪಾಯಕಾರಿ. ನಿಜ ಮಾನವನ ಈ ಅತಿವೇಗದಲ್ಲಿ ಉಂಟಾದ ಮಾನವನಿರ್ಮಿತ ಅಸ್ವಾಭಾವಿಕ ಬದಲಾವಣೆಯನ್ನು ಉಂಟುಮಾಡಿ ಮಾಲಿನ್ಯ ಅಥವ ಮಲಿನಕಾರಿ ಎಂದು ಬೊಬ್ಬೆ ಹೊಡೆದುಕೊಳ್ಳುತ್ತಿದ್ದಾನೆ. ಅಪಾಯಕಾರಿ, ವಿಧ್ವಂಸಕ, ವಿನಾಶಕಾರಿ, ಮಲಿನಕಾರಿ ಇತ್ಯಾದಿ....ಮಾನವನ ಪದಕೋಶ ಬೆಳೆಯುತ್ತಲೇ ಹೋಗುತ್ತದೆ ಅವನ ಸ್ವಾರ್ಥ ಮತ್ತು ಅಲ್ಪ ದೃಷ್ಟಿಗೆ ತಕ್ಕಹಾಗೆ. ಅವಿಶ್ಕಾರಗಳುನ್ನು ತನ್ನ ಸ್ವಾರ್ಥಕ್ಕೆ ಅನ್ವಯಿಸುಕೊಳ್ಳುವುದು ಗೊತ್ತು. ಆದರೆ ಆಗೋಚರ ಸರಪಣಿಯಂತ ಹೆಣೆಯಲ್ಪಟ್ಟ ವಿವಿಧಜೀವಿಗಳ ಪರಸ್ಪರಾವಲಂಬನೆ ಅಂತರ ಕ್ರಿಯೆ, ಪ್ರತಿಕ್ರಿಯೆಗಳ ಬಗ್ಗೆ ಇನ್ನೂ ಅಜ್ಞಾನ. ಅಥವ ಜಾಣ ಕುರುಡು ಮತ್ತು ಕಿವುಡು. ವಿಷಕೂಪ ಈಗಿನ ಜಗತ್ತು. ಯಾವದೇಶವೂ ಹೊರತಲ್ಲ ಇದಕ್ಕೆ. ಯುರೋಪ್ ನ ಕಾರ್ಖಾನೆ ಚಿಮಿಣಿಗಳು ಊಗಳುವ ಕಪ್ಪು ಮಲಿನಕಾರಿ ಮಾರಕ ಹೊಗೆ ಅರೆಬಿಯಾದೇಶಗಳಲ್ಲಿ ಆಮ್ಲಮಳೆ ಉಂಟುಮಾಡಬಹುದು. ಅಮೇರಿಕಾದ ಓಕ್ ಮರಗಳಿಗೆ ಸಿಂಪಡಿಸಿದ ಡಿ.ಡಿ.ಟಿ. ಬ್ರಿಟನ್ ನಲ್ಲಿ ಬೆಳ್ಳಕ್ಕಿ ಅಥವಾ ಕಡಲ ಕಾಗೆ, ಸೀಗಲ್ ಗಳ ಮೊಟ್ಟೆಯ ಹೊರತೊಗಟೆ ಬೆಳವಣಿಗೆಯನ್ನು ಸೀಮಿತಗೊಳಿಸಿ ತೆಳುವಾಗಿ ಬೆಳೆದು....ಒಡೆದು ಸೋರಿಹೋಗಿ ಮರಿಗಳ ಹಂತತಲುಪದೇ ಸಾಯುವ ದಾರುಣ ದುರಂತವಾಗುತ್ತದೆ. ಈ ಗ್ರಹದಲ್ಲಿ ಪ್ರತಿಯೊಂದು ಜೀವಿ, ಪ್ರತಿಯೊಂದು ಯಾವುದೆ ಪ್ರದೇಶದ ಚಟುವಟಿಕೆಗಳ ಅಗೋಚರ ಸ್ಥಿತಿಯಲ್ಲಿ ನಮ್ಮ ಅರಿವಿಗೆ ಬರುವುದೇ ಇಲ್ಲ.ಆದರೆ ಇಡೀ ಈ ಲೋಕದ ಪರಿಸರದ ಪ್ರತಿಯೊಂದು ಘಟಕಗಳೂ ಅದೃಶ್ಯದಲ್ಲಿ ನಿಕಟವಾಗಿ ಒಂದರೊಂದಲ್ಲಿ ಬೆರೆತಿವೆ. ಒಂದಕ್ಕೊಂದು ಪೂರಕವಾಗಿವೆ. ಇಲ್ಲಿಯಾರು ನಿಜ ಅರ್ಥದಲ್ಲಿ ಸ್ವತಂತ್ರಜೀವಿಗಳಲ್ಲ. ಎಲ್ಲರೂ ಅವಲಂಬಿತರೇ ತಮ್ಮ ಅರಿವಿಲ್ಲದೆ ಇತರ ತಮ್ಮ ಊಹೆಗೆ ಬಾರದ, ಎಲ್ಲೋ ಇರುವ ಜೈವಿಕ ಅಂಶಗಳು ನಮ್ಮ ಗಮನಕ್ಕೆ ಬರುವುದೇ ಇಲ್ಲ. ಜೀವಿಗಳ ಪರಸ್ಪರ ಸಂಭಂದ ಅರ್ಥಮಾಡಿಕೊಳ್ಳದಷ್ಟು ದಡ್ಡನಲ್ಲ ಮಾನವ. ಈಗ ಮಾನವನಿಗೆ ಅನುಭವಕ್ಕೆ ಬಂದು ಅರ್ಥಮಾಡಿಕೊಳ್ಳುತ್ತಿದ್ದಾನೆ. ಆದರೆ ದುರಾಭ್ಯಸ ಮತ್ತು ಚಟಗಳು ಬೇಗ ಹೋಗುವುದಿಲ್ಲ. ವ್ಯಸನಗಳಂತೆ ಕಾಡುತ್ತಿವೆ ನಮ್ಮ ಸ್ವಾರ್ಥಗಳು, ದುರಾಸೆಗಳು.
ಊದಿನಕಡ್ಡೆ ಸುಡುವುದು ಅಥವಾ ದೀಪಹಚ್ಚುವುದರಿಂದ ವಾಯು ಮಾಲಿನ್ಯ ಉಂಟುಮಾಡುತ್ತದೆ ಎಂಬ ಸೂಕ್ಷ್ಮತೆ ಇರುವ ಜನರು ತಮ್ಮ ಐಶೋಅರಾಮಿ, ಆಲಸಿಲುಪ್ತ ಜೀವನ ಶೈಲಿಯಿಂದ ಉಂಟಾಗುತ್ತಿರುವ ಅಗಾಧ ಸಂಪನ್ಮೂಲಗಳ ಅತೀ ಎಗ್ಗಿಲ್ಲದ ಶೋಷಣೆಯಿಂದಾಗಿ ಪರಿಸರ ಮಾಲಿನ್ಯವಷ್ಟೇ ಅಲ್ಲ. ಎಲ್ಲಾ ಸಂಪನ್ಮೂಲಗಳ್ಲು ಬರಿದಾಗಿ ನವೀಕರಣಹೊಂದದೇ ಬರಿದಾಗುತ್ತಿವೆ ಸಂಪನ್ಮೂಲಗಳು ಎನ್ನುವ ಪ್ರಜ್ಞೆ ಪ್ರಗತಿಶೀಲ ಮಾನವರಿಗೆ ತಿಳಿದಂತೆ ಕಾಣುತ್ತಿಲ್ಲ.
ನಿಜ...
ಜೈವಿಕವಾಗಿ ಯಾವುದೇ ಇತರ ಜೀವಿಗಳಿಗೆ ಇಂದಿನ ಮಾನವನ ಹಾಗೆ ಅಂತ್ಯಕ್ರಿಯೆಯ ವಿಧಿ,ವಿಧಾನಗಳು, ಪದ್ದತಿಗಳು ಬೇಕಿಲ್ಲ, ಇರುವುದಿಲ್ಲ.ಪ್ರತಿಜೀವಿಗಳ ಅಂತ್ಯಕ್ರಿಯೆಯ ಜವಾಬ್ದಾರಿ ಪ್ರಕೃತಿತಾನೇ ವಹಿಸಿಕೊಂಡಿದೆ.ಯಾವುದೇ ಜೀವಿ ಸತ್ತನಂತರ ಅದರ ದೇಹ ಕೊಳೆಯುತ್ತದೆ. ಅಂದರೆ ಸೂಕ್ಷಾಣುಗಳ ಕ್ರಿಯೆಗಳಿಗೆ ಒಳಗಾಗಿ ಸರಳ ವಸ್ತುಗಳಾಗಿ ಮಣ್ಣಿನಲ್ಲೇ ಶೇಖರವಾಗಿ ಮಣ್ಣು ಫಲವತ್ತವಾಗುತ್ತದೆ. ಇಲ್ಲವೇ ಬೃಹತ್ ಜೀವಿಗಳ ದೇಹ ಅಪೂರ್ಣ ದಹನಕ್ರಿಯೆ ಮತ್ತು ಸೂಕ್ಷಾಣುಗಳ ಕ್ರಿಯೆಯಿಂದಾಗಿ ಪಳೆಯುಳಿಕೆ ಇಂಧನಗಳಂತಹ ಕಲ್ಲಿದ್ದಲು, ಕಚ್ಚಾತೈಲ ಇತ್ಯಾದಿ ವಸ್ತುಗಳನ್ನು ಸ್ತರೀಕರಿಸುತ್ತವೆ. ಅದನ್ನು ಉಪಯೋಗಿಸಲೇ ಬೇಕೆಂಬ ದುರಾಸೆ ಇತರ ಯಾವ ಜೀವಿಗಳೀಗೂ ಇಲ್ಲ ನಮ್ಮನ್ನು ಹೊರತು ಪಡಿಸಿ. ಇರುವುದೆಲ್ಲ ನಮಗೆ, ನಮಗಾಗಿ ಮತ್ತು ನಮ್ಮದೇ ಎಂಬ ಧೋರಣೆ.
ಒಟ್ಟಿನಲ್ಲಿ ಸತ್ತಜೀವಿಗಳ ದೇಹದ ವಿಘಟನೆಕ್ರಿಯೆ ಉಂಟಾಗಿ ಎಲ್ಲಾ ಸಾವಯವ ರಾಸಾಯನಿಕ ಸಂಯುಕ್ತಗಳು, ಸರಳ ಸಂಯುಕ್ತಗಳಾಗಿ ಮಣ್ಣಿನಲ್ಲಿ ಸಂಗ್ರಹವಾಗುತ್ತದೆ ಇಲ್ಲವೆ ಇನ್ನೂ ಅನೇಕ ಕ್ಲಿಷ್ಟ ವಿಘಟನಕ್ರಿಯೆಗಳಿಂದ ವಾತಾವರಣದಲ್ಲಿ ಸೇರಿ ಮತ್ತೆ ಮಣ್ಣನ್ನೇ ತಲುಪುತ್ತದೆ ಮಳೆಯ ಮೂಲಕ...ಹೀಗೆ ಯಾವುದೇ ವಸ್ತುಗಳು ಜೀವಮಂಡಲದ ಗುರುತ್ವಾಕರ್ಷಣೆಯಿಂದ ತಪ್ಪಿಸಿ ಕೊಂಡು ಹೋಗಲು ಸಾಧ್ಯವಿಲ್ಲ. ಹಾಗೆ ಆಗಬೇಕಾದರೆ ವಿಶೇಷ ಶಕ್ತಿಯಮೂಲಕ ಅಂತರಕ್ಷಕ್ಕೆ escape velocity ಯಿಂದ ವಿಶೇಷ ಶಕ್ತಿಯಮೂಲಕ ಸೇರಿಸಬಹುದು ಅಷ್ಟೇ. ಇಲ್ಲೇ ಬೇರೇ,ಬೇರೇ ರೂಪಗಳಲ್ಲಿಗಿರಿಕಿಹೊಡೆಯುತ್ತಿರುತ್ತೇವೆ ಎಲ್ಲರೂ, ಎಲ್ಲವೂ...ಸಹಾ...... ಎಲ್ಲಿಗೂ ಹೋಗಲು ಸಾಧ್ಯವಿಲ್ಲ.....ಹಾಗೆ ಯಾವುದೇ ವಸ್ತುಗಳು ಅಂತರಕ್ಷ ಕಾಯಗಳಿಂದ ಭೂಮಿಯನ್ನು ಪ್ರವೇಶಿಸಲು ಸಾಧ್ಯವಿಲ್ಲ ಸೌರವಿಕಿರಣವನ್ನು ಹೊರತುಪಡಿಸಿ. ಕ್ಷುದ್ರ ಗ್ರಹಗಳು ಅಥವಾ ಉಲ್ಕೆಗಳ ಅಪೂರ್ಣ ದಹನಕ್ರಿಯೆಯಿಂದ ಅದರ ಶೇಷ ಭೂಮಿತಲುಪಿ ಅನಾಹುತ ಉಂಟುಮಾಡಬಹುದು. ಅಥವಾ ದೊಡ್ಡ ಕಂದರ ಅಥವಾ ಕ್ರೇಟರ್ ಗಳನ್ನು ಸೃಷ್ಟಿ ಮಾಡಬಹುದು. ಅಥವಾ ಸಾಗರಕ್ಕೆ ಅಪ್ಪಳಿಸುವ ಈ ಉಲ್ಕೆಗಳು ಜಲಾವಾಸ ಮತ್ತು ಅದರಂಚಿನ ನೆಲ ಆವಾಸದಲ್ಲೂ ಅಲ್ಲೋಲ ಕಲ್ಲೋಲ ಉಂಟುಮಾಡಬಹುದು.
ಇನ್ನು ದೇಹ ಸುಡುವ ಮೂಲಕ ಆ ದೇಹದಲ್ಲಿನ ಎಲ್ಲಾ ಅಂಶಗಳು ಶೀಘ್ರವಾಗಿ ದಹಿಸಿ ಸರಳ ಸಂಯುಕ್ತ ವಸ್ತುಗಳು ಅನಿಲರೂಪದಲ್ಲಿ ವಾತಾವರಣಸೇರುತ್ತವೆ. ಜೀವಿಗಳ ದೇಹದಲ್ಲಿ ಸುಮಾರು 60%.... ರಕ್ತ‎: ‎50% ಮಿದುಳು‎: ‎80–85% ಸ್ನಾಯುಗಳು : ‎70–75% ನೀರು
(ರಕ್ತ, ಕೊಬ್ಬು, ಅಂಗಾಂಶ, ಜೀವಕೋಶಗಳಲ್ಲಿನ ಕೋಶರಸ ಇತ್ಯಾದಿ, ಮೂಳೆಯೂ ಸೇರಿ)
ಇರುವುದರಿಂದ ದಹನಕ್ರಿಯೆಯಲ್ಲಿ ನೀರು ಆವಿಯರೂಪದಲ್ಲಿ ವಾತಾವರಣ ಸೇರುತ್ತದೆ. ಇನ್ನುಳಿದ ವಸ್ತುಗಳಲ್ಲಿನ ಇಂಗಾಲ ಬೂದಿಯಾಗಿ ನೆಲದಲೇ ಉಳಿಯುತ್ತದೆ. ಮಣ್ಣಲ್ಲಿ ಬೆರೆತು ಸಸ್ಯಗಳಿಗೆ ಉಪಯುಕ್ತ ಕಿರುಪೋಷಕ ಲವಣಗಳಾಗುತ್ತವೆ ಮೂಳೆಗಳ ಅಸ್ತಿವಿಸರ್ಜನೆಯಲ್ಲಿ ಯಾವುದೇ ನದಿಗೆ ಹಾಕಿದರೂ, ಸಾಗರಸೇರಿಸಿದರೂ ಕೊನೆಗೆ ಅದು ವಿಘಟನಾಕ್ರಿಯೆಯ ಮೂಲಕ ವಿವಿಧ ಅವಶ್ಯಕ ಲವಣಗಳು ಜಲಚರ ಜೀವಿಗಳ ದೇಹಸೇರಿ ಅವುಗಳ ಚಯಾಪಚಯ (Metabolism) ಕ್ರಿಯಗಳ ಮೂಲಕ, (ವಿಸರ್ಜನೆ, ಜೀರ್ಣಕ್ರಿಯೆ, ಬೆಳವಣಿಗೆ ಇತ್ಯಾದಿ) ಉಸಿರಾಟಕ್ರಿಯೆಯಲ್ಲಿ ಉತ್ಪತ್ತಿಯಾಗುವ ಆಮ್ಲಜನಕ, ಇಂಗಾಲದ ಡೈಆಕ್ಸೈಡ್, ಮೂತ್ರ, ಮಲ ಇತ್ಯಾದಿ ತ್ಯಾಜ್ಯವಸ್ತುಗಳು ನೀರಿನಲ್ಲಿಯೇ ಕರಗಿ ಅಲ್ಲಿನ ಜೀವಿಗಳಿಗೆ ಆಸರೆಯಾಗುತ್ತದೆ. ಮತ್ತೆ ಅದೇ ಲವಣಸಾಂದ್ರಿತ ನೀರು ಆವಿಕ್ರಿಯೆಯಲ್ಲಿ ಮೋಡವಾಗಿ ಭೂಪ್ರದೇಶಗಳ ಮೇಲೆ ಚಲಿಸಿ ಮತ್ತೇ ಮರಳಿ ಮಣ್ಣನ್ನು ಸೇರುತ್ತದೆ ಲವಣಮತ್ತು ಖನಿಜರೂಪಗಳಲ್ಲಿ. ಹೀಗೆ ಈ ಜಗದ ಎಲ್ಲಾ ಜೈವಿಕ ಹಾಗೂ ಅಜೈವಿಕ ಅಂಶಗಳ ಅಥವಾ ವಸ್ತುಗಳ ರೂಪ ಸತತ ರೂಪಬದಲಾವಣೆಗೊಂಡು ಒಂದು ಸ್ಥಳದಿಂದ ಇನ್ನೊಂದು ಸ್ಥಳ ಅಥವಾ ಒಂದು ಆವಾಸದಿಂದ ಇನ್ನೊಂದು ಆವಾಸವನ್ನು ತಲುಪಿ ಚಕ್ರೀಯಚಲನೆ ಮುಂದುವರಿಸುತ್ತದೆ. ಇದು ನಿಲ್ಲದ ಜೈವಿಕ ಚಕ್ರ ವಿಕಾಸವನ್ನು ಸುಸ್ಥಿತಿಯನ್ನು ಮುಂದುವರಿಸುವ ತಂತ್ರ.
ನಿಜ....ಕೊಳೆಯುವುದು ನೈಸರ್ಗಿಕ ಕ್ರಿಯೆಯಾದುದರಿಂದ ಯಾವ ಅಥವ ಯಾರ ಅಂತ್ಯಸಂಸ್ಕಾರ ಪದ್ದತಿಯೂ ಬೇಕಿಲ್ಲ...ಮತ್ತು ಅನವಶ್ಯಕ. ಹೂಳುವುದು ಅಥವ ಸುಡುವುದು ಎರಡರ ಅಗತ್ಯವೂ ಇಲ್ಲ. ಆದುದರಿಂದ ಮಾನವನ ಈ ಧಾರ್ಮಿಕ ಪಧ್ದತಿಗಳಿಗೆ ಬದಲಾಗಿ ಪರ್ಯಾಯ ವ್ಯವಸ್ಥೆ ಕಂಡುಕೊಳ್ಳಬೇಕು.
ಎಲ್ಲೋ ಓದಿದ ನೆನಪು...ಪ್ರಾಯಶಃ ಜಿ.ಎಸ್.ಎಸ್. ರವರ ಕವನ ಎಂಬ ನೆನಪು.....ಅದರಲ್ಲಿನ ಒಂದು ಸಾಲು.....
"ನಾಯ ನರಿಗಳು ನನ್ನ ಹೆಣತಿಂದು ನಲಿದಾವು ದಯಮಾಡಿ ನೀ ಗೋರಿ ಕಟ್ಟಬೇಡ"
ವರ್ತಮಾನ ಸನ್ನಿವೇಶದಲ್ಲಿ ಯೋಚಿಸಲೇ ಬೇಕಾದಂತಹ ಪರಿಸರ ಸಂಭಂದಿ ಸಾಲುಗಳು...
ಇನ್ನು... ಮಾನವರ ಅತಿಮುಖ್ಯ ಅಂತ್ಯಕ್ರಿಯಾ ಪದ್ದತಿಗಳ ಇತಿಮಿತಿಗಳನ್ನು ನೋಡೋಣ. ಹೂಳುವುದು, ಸುಡುವುದು ಅಥವಾ ಪಾರ್ಸಿಗಳಂತೆ ಹದ್ದುಗಳಿಗೆ ಹೆಣವನ್ನು ನಿರ್ಧಿಷ್ಟ ಜಾಗದಲ್ಲಿ ’ದಖ್ಮಾ’ (Tower of Silence) ಮಾಂಸಾಹಾರಿ ಪಕ್ಷಿಗಳಿಗೆ ಆಹಾರವಾಗಿಡುವುದು. ಇನ್ನೂ ಅನೇಕ ಪದ್ಧತಿಗಳಿರಬಹುದು ವಿವಿದ ಜನಾಂಗಗಳಲ್ಲಿ.
ದೇಹಗಳನ್ನು ಹೂಳುವುದು ಮಾನವನ ಸಾಂಕೃತಿಕ ವಿಕಾಸದ ಪ್ರಮುಖ ಹಂತ. ನಿಯಾಂಡರ್ತಾಲ್ ಮತ್ತು ಕ್ರೋಮ್ಯಾಗ್ನಾನ್ ಮಾನವರು ಸತ್ತವರನ್ನು ಹೂಳುತ್ತಿದ್ದರೆಂದು ನಂಬಲಾಗಿದೆ. ಅಂದರೆ ಕನಿಷ್ಟ ಐವತ್ತು ಸಾವಿರ ವರ್ಷಗಳ ಹಿಂದಿನಿಂದಲೇ ಈ ಪದ್ಧತಿ ಆರಂಭವಾಗಿ...ಇಂದು ಮಾನವ ಸಂಸ್ಕೃತಿಯ ಉತ್ತುಂಗ ಸ್ಥಿತಿತಲುಪಿರುವ ಹಂತ. ಈಗ ಸ್ಮಶಾನ, ರುಧ್ರಭೂಮಿ, ಶವಾಗಾರ, Burial Ground, Tomb,catacomb, cemetery,channel house churchyard, graveyard...ಗೋರಿ, ಶಿಲುಬೆ, ಬೃಂದಾವನ ಇತ್ಯಾದಿ. ಒಂದೊಂದು ಮತಕ್ಕೆ ತಮ್ಮದೇ ಶವಸಂಸ್ಕಾರ ಕೇಂದ್ರ ಬೇಕು ಎಲ್ಲಾ ಧಾರ್ಮಿಕ ಹಿಂಬಾಲಕರಿಗೆ.
ಈಗಿನ ಸಂದರ್ಭದಲ್ಲಿ ಯೋಚಿಸಿದಾಗ ಹೂಳುವುದಕ್ಕೆ ಬೇಕಾಗುವ ಸ್ಥಳ ಹೆಚ್ಚಾಗುತ್ತಿದೆ. ಈಗಾಗಲೇ ಮಾನವ ತನ್ನ ಸ್ವಾರ್ಥಕ್ಕೆ ಕಾಡು, ಹುಲ್ಲುಗಾವಲು ಹಾಗು ಇತರ ಅವಾಸಗಳನ್ನು ಕೃಷಿ ಚಟುವಟಿಕೆಗಳಿಗೆ ಮತ್ತು ತನ್ನ ಸವಲತ್ತುಗಳಿಗಾಗಿ ನಿರ್ಣಾಮ ಮಾಡಿದ್ದಾನೆ. ಯಾವುದೇ ಹಳ್ಳಿ, ಊರು, ಅಥವಾ ಬೃಹುತ್ ನಗರ ತೆಗೆದುಕೊಂಡರೆ ಅಲ್ಲಿ ಅಂತ್ಯಕ್ರಿಯೆಗೆ ಜಾಗಸಾಲುತ್ತಿಲ್ಲ. ಈ ಕರೋನಾ ಹಾವಳಿಯಲ್ಲಿ ಅಸ್ವಾಭಾವಿಕವಾಗಿ ಸಾವಿನ ಸಂಖ್ಯೆ ಹೆಚ್ಚಾಗಿ ಸಾಮೂಹಿಕವಾಗಿ
ದೊಡ್ಡ,ದೊಡ್ಡ ಗುಂಡಿಗಳಲ್ಲಿ ಹಾಕುವ ಸಂಸ್ಕಾರವನ್ನೂ ಕಂಡಿದ್ದೇವೆ. ಬ್ರಜಿಲ್ ನ ಉದಾಹರಣೆ ಎಲ್ಲರ ಕಣ್ಮುಂದಿದೆ. ಬಳ್ಳಾರಿಯ ಘಟನೆಯನ್ನೂ ಮರೆಯಲಾಗುವುದಿಲ್ಲ. ಇದು ಕೇವಲ ಅಮಾನವೀಯ ಅಷ್ಟೇ ಅಕ್ಕ ಅವೈಜ್ಞಾನಿಕ ಮತ್ತು ಅಪಾಯಕಾರಿ.
ಪ್ರತಿ ವರ್ಷ ಸರ್ಕಾರ ಅದಕ್ಕಾಗಿ ವಿವಿಧ ಮತೀಯರಿಗೆ ಹೊಸ,ಹೊಸ ಜಾಗ ಮಂಜೂರು ಮಾಡುತ್ತಿದೆ. ಇದು ಎಲ್ಲೆಗೆ ಕೊನೆ ಗೊಳ್ಳಬಹುದು? ತಿಳಿದಿಲ್ಲ. ನಗರ ಪ್ರದೇಶಗಳೆಲ್ಲಾ...ಈಗಾಗಲೇ ಹಸಿರು ವಲಯವನ್ನು ಅತಿಕ್ರಮಿಸಿ ತಮ್ಮಮ್ಮ ವಸತಿಗಳನ್ನು ನಿರ್ಮಿಸಿಕೊಳ್ಳುತ್ತಿದ್ದಾರೆ. ಇನ್ನು...ನಾವು ಸತ್ತಮೇಲೂ ನಮಗೊಂದು ಜಾಗ ಈಗಲೇ ಕಾದಿರಿಸಿರುವ ಕಾಲ ಕಾಣುತ್ತಿದ್ದೇವೆ. ಇದು ಅತಿಶಯೋಕ್ತಿ ಅಲ್ಲ. ಅಂದರೆ ಮಾನವ ಇರುವಿಕೆಗೂ ಪರಿಸರ ಹಾಳಾಗಬೇಕು, ಸತ್ತನಂತರವೂ ಯಾವುದೇ ಜೈವಿಕ, ಪ್ರಾಕೃತಿಕ ಕ್ರಿಯೆಗಳಿಂದ ತಪ್ಪಿಸಿಕೊಂಡು ಯಾವುದೋ ಪೆಟ್ಟೆಗೆಯಲ್ಲಿ ಭದ್ರವಾಗಿ, ಶಾಶ್ವತ ಮಲಗುವುದು ಅಮಾನವೀಯ ಹಾಗೂ ಹಾಸ್ಯಾಸ್ಪದ ಅನಿಸುತ್ತೆ..
ಇನ್ನು ಸುಡುವ ಕ್ರಿಯೆಗೆ ಬಂದರೆ ಸತ್ತವರನ್ನೆಲ್ಲಾ ಸುಡಲು ಎಲ್ಲಾ ಕಾಡುಗಳ ಮರಗಳನ್ನು ಉರುವಲು ರೂಪದಲ್ಲಿ ಪೂರೈಸಲಾಗುವುದಿಲ್ಲ. ಪ್ರಪಂಚದ ಎಲ್ಲಾ ಕಾಡುಗಳು ಮಾನವ ಅಂತ್ಯಕ್ರಿಯಗೆ ಸಾಕಾಗಲಿಕ್ಕಿಲ್ಲ. ಇದು ಉತ್ಪ್ರೇಕ್ಷೆ ಖಂಡಿತಾ ಅಲ್ಲ. ಇನ್ನು ಇದರಿಂದ ವಾತಾವರಣ ಸೇರುವ ಕಾರ್ಬನ್ ಡೈಆಕ್ಸೈಡ್ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿ ವಾಯು ಮಾಲಿನ್ಯದ ತೀವ್ರತೆ ಊಹಿಸಲಾರದ ಹಂತ ತಲುಪಬಹುದು.
ಗಂಭೀರವಾಗಿ ಯೋಚಿಸುವ ಕಾಲ ಇದು. ಕರ್ನಾಟಕದ ಆರು ಕೋಟಿಗಿಂತ ಹೆಚ್ಚು ಜನ, ದೇಶದ ಒಟ್ಟು ಸುಮಾರು ೧೩೦ ಕೋಟಿ ಜನಸಂಖ್ಯೆಯ ಮಾನವ ದೇಹಗಳಿಗೆ ನಮ್ಮ ನೆಲಸಾಕಾಗುತ್ತದೆಯಾ? ಇದರೊಟ್ಟಿಗೆ ಈಗಾಗಲೆ, ಅಣೆಕಟ್ಟು, ಗೃಹನಿರ್ಮಾಣ, ಇನ್ಫ್ರಾಸ್ಟೆಕ್ಚರ್, ರಸ್ತೆ, ಸೇತುವೆ ನಿರ್ಮಾಣ........ಪಟ್ಟಿಮುಗಿಯುವುದಿಲ್ಲ ಮಾನವನ ಅವಶ್ಯಕತೆಗಳು.
ಇರುವುದೊಂದೇ ಭೂಮಿ..,
ಭೂಮಿಯೇ ಸ್ಮಶಾನವಾಗಲು ಸಾಧ್ಯವೆ? ಸತ್ತವರ ದಹನಕ್ರಿಯೆಯೂ ಅಷ್ಟೇ...ಅದೇ ಸಮಸ್ಯೆ. ಬೇಕಾಗುವ ಜಾಗ ಕಡಿಮೆ ಇರಬಹುದು. ಆದರೆ ಅದಕ್ಕೆ ಉರುವಲಿಂದ ಕಾಡುಗಳ ಮರಗಳೆಲ್ಲವೂ ಸಾಕಾಗಲಿಕ್ಕಿಲ್ಲ, ಭೂಮಿಯ ಒಳತೊಗಟೆಯ ಲಾವರಸವನ್ನೇ ಹೊರ ತರಬೇಕಾದೀತು.
ಈಗಿನ ಜನದಟ್ಟಣೆಯನ್ನು ಗಮನಿಸಿ ತಿಳಿದ ಜನಗಳು ತಮ್ಮ ತಮ್ಮ ಧರ್ಮ ಪದ್ಧತಿಗಳಲ್ಲಿ ಸೂಕ್ತ ಪರಿಸರ ಪೂರಕ ಸುಧಾರಣೆಗಳನ್ನು ಅಳವಡಿಸಿಕೊಂಡು, ಯಾವುದಾದರೂ ಒಂದು ವಿದ್ಯುತ್ ಸಾರ್ವಜನಿಕ ಚಿತಾಗಾರದಲ್ಲಿ ದಹಿಸಿ ನೆಲ. ಮಣ್ಣು, ಮರಗಳನ್ನು ಉಳಿಸಿಕೊಳ್ಳಬಾರದೆ? ವಿದ್ಯುತ್ ಚಿತಾಗಾರ ಎಲ್ಲವನ್ನು ಪರಿಸರಾತ್ಮಕವಾಗಿ ಕಡಿಮೆ ಸಮಯದಲ್ಲಿ ನಿರ್ವಹಿಸಬಹುದು...ಮಾಲಿನ್ಯ ಪ್ರಮಾಣ ಕನಿಷ್ಟ.
ನನಗೆ ಗೊತ್ತು ಇದು ಅತಿ ಸೂಕ್ಷ್ಮ ಧಾರ್ಮಿಕನಂಬಿಕೆಗಳ ವಿಚಾರ. ಆದರೆ ಇಂದಲ್ಲ ನಾಳೆ ಮಾನವ ಇದನ್ನುಅರಿಯುತ್ತಾನೆ ಮತ್ತೆ ಬದಲಾಗುತ್ತಾನೆ...ಅಥವಾ ಬದಲಾಗಲೇ ಬೇಕು. ಇಲ್ಲದಿದ್ದಲ್ಲಿ ಜೀವಂತ ಜನಗಳ ವಾಸ ಸ್ಥಾನಗಳಿಗಿಂತ ಸ್ಮಶಾನಗಳೇ ನಗರಗಳಾಗಬಹುದು...

Comments

Popular posts from this blog

ಕಾಗೆ....